ಹಣ ಸರ್ವಸ್ವ ಅಲ್ಲ, ದುಡಿಯುವ ಇಚ್ಛಾಶಕ್ತಿ ಮುಖ್ಯ: ಮುನಿಯಾಲು ಉದಯ ಶೆಟ್ಟಿ

KannadaprabhaNewsNetwork | Published : Mar 11, 2025 12:47 AM

ಸಾರಾಂಶ

ಬಜಗೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಮೂಡುಬಿದಿರೆ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ರಜತ ಮಹೋತ್ಸವ ಸಮಾರಂಭ ಮತ್ತು ಸ್ವಾವಲಂಬನೆ ದಿನಾಚರಣೆ ಉದ್ಘಾಟನೆ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಬದುಕಲು ಹಣ ಮಾತ್ರ ಮುಖ್ಯವಲ್ಲ , ದುಡಿಯಬೇಕೆಂಬ ಇಚ್ಛಾ ಶಕ್ತಿ ಮುಖ್ಯ. ಭೂಲೋಕದ ಸ್ವರ್ಗದಂತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಎಲ್ಲರೂ ಒಂದು ಕಡೆ ಒಟ್ಟು ಸೇರಿ ಒಂದೇ ಕುಟುಂಬದವರಂತೆ ಬೆರೆತು ಸುಖ-ದುಃಖ ಹಂಚಿಕೊಂಡು ಬಾಳಲು ಅವಕಾಶ ಸಿಕ್ಕಿದೆ . ಇದನ್ನು ಸದುಪಯೋಗಿಸಿಕೊಳ್ಳೋಣ ಎಂದು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ.

ಬಜಗೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆದ ಮೂಡುಬಿದಿರೆ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ರಜತ ಮಹೋತ್ಸವ ಸಮಾರಂಭ ಮತ್ತು ಸ್ವಾವಲಂಬನೆ ದಿನಾಚರಣೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಮಾಜದ ದುರ್ಬಲ ಮತ್ತು ಬಡಜನರ ವಿಶೇಷವಾಗಿ ಮಹಿಳೆಯರ ಸಬಲೀಕರಣ ತತ್ವದ ಅಡಿಯಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗಿಸ್ ಅಧ್ಯಕ್ಷತೆ ವಹಿಸಿದ್ದರು .

ಸ್ವಾವಲಂಬನ ದಿನಾಚರಣೆಯ ಸಂದೇಶ ನೀಡಿದ ಮೂಡುಬಿದಿರೆ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ಸುಖದ ಜೀವನ ಎನ್ನುವುದು ಅದು ಸಾಮೂಹಿಕವಾದದ್ದು. ಸಂಘ ಸಂಸ್ಥೆಗಳ ಸದಸ್ಯರಾಗಿ ಸಕ್ರಿಯರಾದಾಗ ಅದನ್ನು ಅನುಭವಿಸುವ ಭಾಗ್ಯ ಲಭಿಸುವುದು ಎಂದರು.

ಆದರ್ಶ ಸಂಸ್ಥೆಯ ನಿರ್ದೇಶಕ ಇಮ್ಯಾನ್ಯುಯಲ್ ಮೋನಿಸ್, ಮೂಡುಬಿದಿರೆ ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷೆ ವಸಂತಿ ಶೆಟ್ಟಿ ಶುಭ ಹಾರೈಸಿದರು.

ಮೂಡಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರುತಿ ಡಿ ಅತಿಕಾರಿ, ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಪೂಜಾರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಗೋಳಿ ಇದರ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ್ ಅತಿಕಾರಿ , ನಿಕಟಪೂರ್ವ ಅಧ್ಯಕ್ಷ ನಿತೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಲೋಚನ ಮತ್ತು ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಯಶೋಧರ ವಂದಿಸಿದರು.

Share this article