ಪ್ರತಿ ಅಭ್ಯರ್ಥಿಗಳ ಖರ್ಚುವೆಚ್ಚ ಬಗ್ಗೆ ನಿಗಾ ವಹಿಸಿ: ಅಲೋಕ್ ಕುಮಾರ್

KannadaprabhaNewsNetwork |  
Published : Mar 31, 2024, 02:02 AM IST
ಅಲೋಕ್30 | Kannada Prabha

ಸಾರಾಂಶ

ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಹಾಯಕ ವೆಚ್ಚ ವೀಕ್ಷಕರ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಯಿತು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಅಲೋಕ್ ಕುಮಾರ್, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಪ್ರತಿಯೊಂದು ವೆಚ್ಚದ ಬಗ್ಗೆ ಪ್ರತೀದಿನ ಕಡ್ಡಾಯವಾಗಿ ವರದಿ ಸಲ್ಲಿಸುವಂತೆ ನಿಗಾ ವಹಿಸಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಅಲೋಕ್ ಕುಮಾರ್, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶನಿವಾರ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಹಾಯಕ ವೆಚ್ಚ ವೀಕ್ಷಕರ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮಾತನಾಡಿದರು.

ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ಎಫ್.ಎಸ್.ಟಿ., ಎಸ್.ಎಸ್.ಟಿ., ವಿ.ವಿ.ಟಿ. ಹಾಗೂ ಇನ್ನಿತರೆ ತಂಡಗಳು ಜವಾಬ್ದಾರಿಯಿಂದ ತಮಗೆ ವಹಿಸಿರುವ ಕೆಲಸ ನಡೆಸಿ, ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸುತ್ತಿರುವ ಬಗ್ಗೆ ನಿಗಾ ವಹಿಸುವುದರ ಜೊತೆಗೆ ಚುನಾವಣಾ ವೆಚ್ಚದ ವರದಿಯನ್ನು ನೀಡಬೇಕು. ಹಣದ ಬಲದ ಮೇಲೆ ಚುನಾವಣೆ ನಡೆಯಬಾರದು. ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಯಬೇಕು ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಚುನಾವಣಾ ವೆಚ್ಚ ನಿರ್ವಹಿಸಲು ನೇಮಕವಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಕ್ಷೇತ್ರ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಕೆಲಸಕ್ಕಾಗಿ ನೇಮಕವಾಗಿರುವ ವಿವಿಧ ತಂಡಗಳು, ಅಧಿಕಾರಿಗಳು, ಸ್ಥಾಪನೆಯಾಗಿರುವ ಚೆಕ್‌ಪೋಸ್ಟ್‌ಗಳಲ್ಲಿನ ಅಧಿಕಾರಿಗಳು ಹಾಗೂ ಇನ್ನಿತರೆ ಚುನಾವಣಾ ಅಧಿಕಾರಿಗಳು ತಮಗೆ ನೀಡಿರುವ ಕಾರ್ಯಗಳನ್ನು ಚಾಚೂ ತಪ್ಪದೇ ಮಾಡಬೇಕು. ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳುವಾಗ ವೀಡಿಯೋ ಚಿತ್ರೀಕರಣವನ್ನು ತಪ್ಪದೇ ಮಾಡಬೇಕು ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರುಗಳು ಬಂದಾಗ ಕೂಡಲೇ ಫ್ಲೈಯಿಂಗ್ ಸ್ಕ್ವಾಡ್‌ಗಳು ಕಾರ್ಯಪ್ರವೃತ್ತರಾಗಿ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಉಲ್ಲಂಘನೆಯಾದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಜಿ.ಪಂ.ನ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಇನ್ನಿತರ ಜಿಲ್ಲಾಮಟ್ಟದ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು