ಕನಕಗಿರಿ: ಕೋತಿ ದಾಳಿಯಿಂದ ಅಸ್ವಸ್ಥರಾಗಿದ್ದ ಶಿಕ್ಷಕ ದೇವೇಂದ್ರಗೌಡರ ನಿವಾಸಕ್ಕೆ ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಶುಕ್ರವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಜು. ೧೭ರಂದು ಬೆಳಗಿನ ಜಾವ ಎಂದಿನಂತೆ ವಾಯುವಿಹಾರಕ್ಕೆ ಚೆನ್ನಮ್ಮ ವೃತ್ತದ ಬಳಿಗೆ ಹೋಗಿದ್ದಾಗ ಕೋತಿಯೊಂದು ದಾಳಿ ಮಾಡಿದ್ದು, ಬಲಗೈಗೆ ಮೂರು ಕಡೆಗಳಲ್ಲಿ ಕಚ್ಚಿ ಗಾಯಗೊಳಿಸಿದೆ. ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದೇನೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಶಿಕ್ಷಕ ದೇವೇಂದ್ರಗೌಡ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಈ ಹಿಂದೆ ತಾಲೂಕಿನ ಹನುಮನಾಳ ಗ್ರಾಮಸ್ಥರಿಗೆ ಹುಚ್ಚು ಮಂಗವೊಂದು ದಾಳಿ ನಡೆಸಲು ಯತ್ನಿಸಿರುವ ದೂರು ಕೇಳಿ ಬಂದಿದೆ. ಅದೇ ಕೋತಿ ಈಗ ಪಟ್ಟಣಕ್ಕೆ ಬಂದಿದ್ದು, ಜನತೆಯ ಮೇಲೆ ದಾಳಿ ಮಾಡಲು ಆರಂಭಿಸಿದೆ. ಪಟ್ಟಣದಲ್ಲಿ ಕೋತಿಗಳು ವಾಸಿಸುವ ಸ್ಥಳ ಪರಿಶೀಲಿಸಲಾಗಿದೆ. ಅರಣ್ಯ ಇಲಾಖೆಯವರ ಸಹಾಯ ಪಡೆದು ಹುಚ್ಚು ಮಂಗವನ್ನು ಸೆರೆ ಹಿಡಿಯಲಾಗುವುದು ಎಂದು ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ವನಪಾಲಕ ಶಿವಕುಮಾರ ವಾಲಿ, ಪಪಂ ಕರ ವಸೂಲಿಗಾರ ಪ್ರಕಾಶ ಮಹಿಪತಿ ಇದ್ದರು. ಕನಕಗಿರಿ ಪಟ್ಟಣದಲ್ಲಿ ಶಿಕ್ಷಕರೊಬ್ಬರ ಮೇಲೆ ಕೋತಿ ದಾಳಿ ನಡೆಸಿದ್ದು, ಈ ಬಗ್ಗೆ ಪಪಂ ಹಾಗೂ ನಮ್ಮ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಗಾಗಲೇ ಮಂಗ ಹಿಡಿಯುವವರನ್ನು ಸಂಪರ್ಕಿಸಿದ್ದು, ನಾಳೆ ಅಥವಾ ನಾಡಿದ್ದು ಹುಚ್ಚು ಮಂಗವನ್ನು ಸೆರೆ ಹಿಡಿಯಲಾಗುವುದು ಎಂದು ಗಂಗಾವತಿ ವಲಯ ಅರಣ್ಯಾಧಿಕಾರಿ ಸುಭಾಷಚಂದ್ರ ಹೇಳಿದರು."ಶಿಕ್ಷಕನ ಮೇಲೆ ಕೋತಿ ದಾಳಿ " ಶಿರ್ಷಿಕೆಯಡಿ ಜು. ೧೯ರಂದು ಕನ್ನಡಪ್ರಭದಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೋತಿ ದಾಳಿಯಿಂದಾಗಿ ಅಸ್ವಸ್ಥರಾದ ಶಿಕ್ಷಕ ದೇವೇಂದ್ರಗೌಡ ಅವರ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಮಂಗ ದಾಳಿ ನಡೆಸಿರುವ ಸ್ಥಳ ಪರಿಶೀಲಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.