ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ದೇವದಾನ ಗ್ರಾಪಂ ವ್ಯಾಪ್ತಿಯ ಮತ್ತಿಖಂಡದ ವ್ಯಕ್ತಿಯೊಬ್ಬರಿಗೆ ಕೆಎಫ್‌ಡಿ ಸೋಂಕು (ಮಂಗನ ಕಾಯಿಲೆ) ತಗುಲಿರುವುದು ಪತ್ತೆಯಾಗಿದೆ.
ಬಾಳೆಹೊನ್ನೂರು: ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ದೇವದಾನ ಗ್ರಾಪಂ ವ್ಯಾಪ್ತಿಯ ಮತ್ತಿಖಂಡದ ವ್ಯಕ್ತಿಯೊಬ್ಬರಿಗೆ ಕೆಎಫ್‌ಡಿ ಸೋಂಕು (ಮಂಗನ ಕಾಯಿಲೆ) ತಗುಲಿರುವುದು ಪತ್ತೆಯಾಗಿದೆ.
ಮತ್ತಿಖಂಡದ ಸತೀಶ್ (32) ಸೋಂಕಿಗೆ ಒಳಗಾದ ವ್ಯಕ್ತಿ. ಸತೀಶ್ ಅವರು ತೋಟಗಳಲ್ಲಿ ಮರಗಸಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ಜ್ವರಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಸಮೀಪದ ಜೇನುಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಗಾಗಿದ್ದು, ಸೋಮವಾರ ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಕೆಎಫ್‌ಡಿ ಸೋಂಕು ತಗುಲಿರುವುದು ದೃಢಪಟ್ಟಿದೆ. ತೋಟಕ್ಕೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಂಗನಿಗೆ ಕಚ್ಚಿರುವ ಉಣಗು (ಉಣ್ಣೆ) ವ್ಯಕ್ತಿಗೆ ಕಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸತೀಶ್ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಕೆಎಫ್‌ಡಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತಿಖಂಡ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಮನೆ ಮನೆಗಳಿಗೆ ತೆರಳಿ ಸೋಂಕಿನ ಕುರಿತು ಜಾಗೃತಿ ಮೂಡಿಸುತ್ತಿದ್ದು, ಮನೆಗಳಿಗೆ ಡಿಎಂಪಿ ತೈಲ, ಮನೆ ಸುತ್ತಲಿನ ಪ್ರದೇಶದಲ್ಲಿ ಸಿಂಪಡಿಸಲು ಔಷಧ ಪುಡಿಗಳನ್ನು ವಿತರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.