ನಂದಿ ಕೂಗು ಅಭಿಯಾನಕ್ಕೆ ಚಾಲನೆ

KannadaprabhaNewsNetwork | Published : Jan 15, 2025 12:46 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜೋಡೆತ್ತಿನ ರೈತರಿಗೆ ಕೃಷಿ ಪದವೀಧರರು ಪಾದಪೂಜೆ ಮಾಡಿ ವೈಜ್ಞಾನಿಕವಾಗಿ ಅವರ ಮಹತ್ವ ಸಾರುವ ಪ್ರಯತ್ನ ಮಾಡುತ್ತಿರುವುದು ಶಿವನ ಪಾದಪೂಜೆ ಮಾಡಿರುವುದಕ್ಕೆ ಸಮವಾದ ಕೆಲಸ ಎಂದು ವಿಶ್ರಾಂತ ಕುಲಪತಿ ಡಾ.ವಿ.ಐ ಬೆಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜೋಡೆತ್ತಿನ ರೈತರಿಗೆ ಕೃಷಿ ಪದವೀಧರರು ಪಾದಪೂಜೆ ಮಾಡಿ ವೈಜ್ಞಾನಿಕವಾಗಿ ಅವರ ಮಹತ್ವ ಸಾರುವ ಪ್ರಯತ್ನ ಮಾಡುತ್ತಿರುವುದು ಶಿವನ ಪಾದಪೂಜೆ ಮಾಡಿರುವುದಕ್ಕೆ ಸಮವಾದ ಕೆಲಸ ಎಂದು ವಿಶ್ರಾಂತ ಕುಲಪತಿ ಡಾ.ವಿ.ಐ ಬೆಣಗಿ ಹೇಳಿದರು.

ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರಾಮೇಶ್ವರ(ಸನ್ಯಾಸಪ್ಪನ) ಮಠದಲ್ಲಿ ನಡೆದ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಗುರು ನಮನ ಕಾರ್ಯಕ್ರಮದ ಅಂಗವಾಗಿ ಕೃಷಿ ಪದವೀಧರರು ಜೋಡೆತ್ತಿನ ರೈತರಿಗೆ ಪಾದಪೂಜೆ ಮಾಡುವ ಮೂಲಕ ನಂದಿ ಕೂಗು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾಶವಾಗುತ್ತಿರುವ ಮಣ್ಣಿನ ಸತ್ವ ಉಳಿಸುವಲ್ಲಿ ವೈಜ್ಞಾನಿಕವಾಗಿ ಜೋಡೆತ್ತಿನ ರೈತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜೋಡೆತ್ತಿನ ರೈತರ ಸಂಖ್ಯೆ ಹೆಚ್ಚಾದರೆ ಮಾತ್ರ ಸಮಾಜದ ಎಲ್ಲ‌ ಜನರಿಗೆ ಗುಣಮಟ್ಟದ ಆಹಾರ ದೊರೆಯಲು ಹಾಗೂ ನಾಗರಿಕತೆ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ನಿವೃತ್ತ ಡೀನ್ ಡಾ.ಎಸ್.ಬಿ.ಕಲಘಟಗಿ ಮಾತನಾಡಿ, ಸರ್ಕಾರ ಜನಪ್ರಿಯ ಯೋಜನೆಗಳಿಗೆ ಹಣ ಖರ್ಚು ಮಾಡುವ ಬದಲು ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡಿದರೆ ಸಮಾಜದ ಎಲ್ಲ ಜನರಿಗೂ ಗುಣಮಟ್ಟದ ಆಹಾರ ನೀಡುವ ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.

ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ಜಿ.ನಾಡಗೌಡ ಮಾತನಾಡಿ, ಜೋಡೆತ್ತಿನ ಕೃಷಿಕರ ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡಲು ನಂದಿ ಕೂಗು ಅಭಿಯಾನವನ್ನು ಕೃಷಿ ಪದವೀಧರರು ಪ್ರಾರಂಭಿಸಿದ್ದೇವೆ. ಜೋಡೆತ್ತಿನ ಕೃಷಿಕರ ಬೆಂಬಲಕ್ಕೆ ದೇಶದ ಎಲ್ಲ ಕೃಷಿ ಪದವೀಧರರು ನಿಲ್ಲುವ ಅವಶ್ಯಕತೆಯಿದೆ. ಅಂದಾಗ ಮಾತ್ರ ನಾವು ಪಡೆದ ವಿದ್ಯೆಗೆ ನ್ಯಾಯ ಸಲ್ಲಿಸಿದಂತಾಗಲಿದೆ ಎಂದರು.

ನಂದಿ ಕೃಷಿ ತಜ್ಞ ಹಾಗೂ ಕಾರ್ಯಕ್ರಮದ ಸಂಘಟಕ ಬಸವರಾಜ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧೇಶ್ವರ ಶ್ರೀಗಳ ಸಹೋದರ ಸೋಮಲಿಂಗ ಬಿರಾದಾರ, ಸಂಗಮೇಶ ಕಾಮನ್ನವರ, ಬಿ.ಎಂ.ಪಾಟೀಲ, ಡಿ.ಬಿ.ಭಜಂತ್ರಿ, ಎಸ್.ಎಚ್.ರಕ್ಕಸಗಿ, ಎಸ್.ಎಸ್.ಸಜ್ಜನ, ಬಸವರಾಜ‌ ಕೋನರಡ್ಡಿ, ಬಿ.ಟಿ.ಈಶ್ವರಗೊಂಡ, ಬಿ.ಅರ್.ಬೊರಗಿ ಮುಂತಾದವರು ಇದ್ದರು.

Share this article