21 ರಿಂದ 23ವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ: ಪಾಪಾರೆಡ್ಡಿ

KannadaprabhaNewsNetwork |  
Published : Jun 19, 2024, 01:13 AM IST
18ಕೆಪಿಆರ್‌ಸಿಆರ್‌ 01:  | Kannada Prabha

ಸಾರಾಂಶ

ಭಾರವಾದ ಕಲ್ಲು ಎಳೆಯುದು, ಗ್ರಾಮೀಣ ಕ್ರೀಡೆ, ಕುಸ್ತಿ ಸ್ಪರ್ಧೆ, ಕಲಾತಂಡಗಳ ಮೆರವಣಿಗೆ, ನೃತ್ಯ ರೂಪಕ ಆಯೋಜನೆ. ಜೂ.21ರಂದು ಬೆಳಗ್ಗೆ 8 ಕ್ಕೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಕರ್ನಾಟಕ ರಾಜ್ಯಗಳ ಎತ್ತುಗಳಿಂದ 1 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದ್ದು, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ಕಾರಹುಣ್ಣಿಮೆ ನಿಮಿತ್ತ ಮುನ್ನೂರುಕಾಪು (ಬಲಿಜ) ಸಮಾಜ ಹಾಗೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಯೋಗದಲ್ಲಿ ಇದೇ ಜೂ.21 ರಿಂದ 23 ರ ವರೆಗೆ ನಗರದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ಹಬ್ಬದ ಅಧ್ಯಕ್ಷ ಎ.ಪಾಪಾರೆಡ್ಡಿ ತಿಳಿಸಿದರು.

ಸ್ಥಳೀಯ ಪತ್ರಿಕಾಭವನದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಿಂದ ಕಳೆದ 24 ವರ್ಷಗಳಿಂದ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದೆ ಎಂದರು.

ನಗರದ ಎಪಿಎಂಸಿ ಗಂಜ್‌ ಆವರಣ ಸೇರಿದಂತೆ ನಿಗದಿತ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಜೋಡೆತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ, ಕುಸ್ತಿ ಸ್ಪರ್ಧೆ, ನೃತ್ಯ ರೂಪಕ, ಜಾನಪದ ಸಂಗೀತ, ಕಲ್ಲುಗುಂಡು, ಮರಳಿನ ಚೀಲ ಎತ್ತುವ ಸ್ಪರ್ಧೆ, ವಿವಿಧ ರಾಜ್ಯಗಳಿಂದ ಕಲಾ ತಂಡಗಳ ಪ್ರದರ್ಶನವು ನಡೆಸಲಾಗುತ್ತಿದೆ ಎಂದು ಹೇಳಿದರು.

ಜೂ.21ರಂದು ಬೆಳಗ್ಗೆ 8 ಕ್ಕೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಕರ್ನಾಟಕ ರಾಜ್ಯಗಳ ಎತ್ತುಗಳಿಂದ 1 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದ್ದು, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ. ಮಟಮಾರಿ ಎಲೆಬಿಚ್ಚಾಲಿಯ ವೀಭದ್ರ ಶಿವಾಚಾರ್ಯ ಸ್ವಾಮೀಜಿ, ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಜಿಲ್ಲೆಯ ಶಾಸಕರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ಅಂದು ಸಂಜೆ 6 ಕ್ಕೆ ನಗರದ ವೀರಾಂಜನೇಯ ಮುನ್ನೂರುಕಾಪು ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ನೃತ್ಯ ರೂಪಕದಲ್ಲಿ ಕರ್ನಾಟಕ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ಮಣಿಪುರ, ರಾಜಸ್ಥಾನ, ಓರಿಸ್ಸಾ ಕಲಾವಿದರು ಕಲೆಯನ್ನು ಪ್ರದರ್ಶಿಸುತ್ತಿದ್ದು, ಸಮಾರಂಭವನ್ನು ಶಾಸಕ ಡಾ.ಶಿವರಾಜ ಪಾಟೀಲ ಉದ್ಘಾಟಿಸುವರು, ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ವಿವರಿಸಿದರು.

ವಿವಿಧ ಕಲಾ ತಂಡಗಳಿಂದ ಪ್ರದರ್ಶನ:

ಹಬ್ಬದ ಎರಡನೇ ದಿನವಾದ ಜೂ.22ಕ್ಕೆ ಅಖಿಲ ಭಾರತ ಮುಕ್ತ ಎತ್ತುಗಳಿಂದ 2 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದು, ಹರಿಹರಪುರದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಗಬ್ಬೂರಿನ ಬೂದಿ ಬಸವೇಶ್ವರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅಂದು ಸಂಜೆ 4ಕ್ಕೆ ಪ್ರಮುಖ ಬೀದಿಗಳಲ್ಲಿ ಮಾತಾ ಲಕ್ಷ್ಮಮ್ಮದೇವಿ ಮೂರ್ತಿಯ ಅಂಬಾರಿ ಹಾಗೂ ಎತ್ತುಗಳ ಬೃಹತ್ ಮೆರವಣಿಗೆ ನಡೆಯಲಿದ್ದು ವಿವಿಧ ರಾಜ್ಯಗಳ ಕಲಾ ತಂಡಗಳಿಂದ ಪ್ರದರ್ಶನ ಜರುಗಲಿದ್ದು, ನಂತರ ಸಂಜೆ 6ಕ್ಕೆ ನಿಜಲಿಂಗಪ್ಪ ಕಾಲೊನಿಯ ಗನೇಶ ಕಟ್ಟೆ ಬಳಿಯಲ್ಲಿ ನೃತ್ಯ ರೂಪಕ ನಡೆಯಲಿದೆ. ಅಭಿನವ ರಾಚೋಟಿ ವೀರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಶಾಸಕ ಡಾ.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಸದ ಜಿ.ಕುಮಾರ ನಾಯಕ ಉದ್ಘಾಟನೆ:

ಇನ್ನು ಹಬ್ಬದ ಕೊನೆದಿನ ಜೂ.23ಕ್ಕೆ ಅಖಿಲ ಭಾರತ ಮುಕ್ತ ಎತ್ತುಗಳಿಂದ 2.5 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ. ಸಂಸದ ಜಿ.ಕುಮಾರ ನಾಯಕ ಉದ್ಘಾಟಿಸಲಿದ್ದು, ಚಿಕ್ಕಸೂಗೂರು ಚೌಕಿಮಠದ ಸಿದ್ದಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು, ರಾಜಕೀಯ ನಾಯಕರು ಹೋರಾಟಗಾರ, ರೈತ ಮುಖಂಡರು ಭಾಗವಹಿಸಲಿದ್ದಾರೆ. ಬಳಿಕ ಮಧ್ಯಾಹ್ನ 3ಕ್ಕೆ ನಗರದ ಲಕ್ಷ್ಮಮ್ಮ ದೇವಿಯ ಕಲ್ಯಾಣ ಮಂಟಪದಲ್ಲಿ ಕಲ್ಲುಗುಂಡು ಹಾಗೂ ಮರಳಿನ ಚೀಲ ಎತ್ತುವ ಸ್ಪರ್ಧೆ ನಡೆಯಲಿದ್ದು, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬಂಗಿ ನರಸರೆಡ್ಡಿ ಉದ್ಘಾಟಿಸುವರು. ಅದೇ ರೀತಿ ಸಂಜೆ 5 ಕ್ಕೆ ರಾಜೇಂದ್ರ ಗಂಜ್ ಆವರಣದಲ್ಲಿ ಕುಸ್ತಿ ಸ್ಪರ್ಧೆ ನಡೆಯಲಿದ್ದು, ಪಾಪಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ. ನಂತರ ಸಂಜೆ 6 ಕ್ಕೆ ಗಂಜ್ ಕಲ್ಯಾಣ ಮಂಟಪದಲ್ಲಿ ವಿವಿಧ ರಾಜ್ಯಗಳ ಕಲಾವಿದರಿಂದ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ನಡೆಯಲಿದೆ. ಶಾಸಕ ಡಾ.ಶಿವರಾಜ ಪಾಟೀಲ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಮುಂಚೆ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಗೆದ್ದ 6 ಜೋಡೆತ್ತುಗಳ ಮಾಲೀಕರಿಗೆ ನಗದು ಬಹುಮಾನ ವಿತರಿಸಲಾಗುತ್ತಿತ್ತು. ಈ ವರ್ಷ ಏಳು ಜನರಿಗೆ ಬಹುಮಾನ ವಿತರಿಸಲು ತೀರ್ಮಾನಿಸಲಾಗಿದೆ. ಇದರ ಜೊತೆಗೆ ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಳ್ಳುವವರಿಗೆ ಬೆಳ್ಳಿ ಕಡಗ, ಕುಸ್ತಿ ಪಟುಗಳಿಗೆ ತಲಾ 10 ಸಾವಿರ ಪ್ರೋತ್ಸಾಹಧನ ನೀಡಲಾಗುವುದು ಎಂದು ಹೇಳಿದರು.

ಪ್ರತಿ ವರ್ಷದಂತೆ ಎಪಿಎಂಸಿ 5 ಲಕ್ಷ ರು. ನೀಡಿದ್ದು ಬಿಟ್ಟರೆ ಉಳಿದ ಮೊತ್ತವನ್ನು ಮುನ್ನೂರು ಕಾಪು ಸಮಾಜವೆ ಭರಿಸುತ್ತಿದೆ. ಸುಮಾರು 50 ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮ ರೂಪಿಸಿದ್ದು, ಮುಂದಿನ ವರ್ಷ ಹಬ್ಬವನ್ನು 25ನೇ ವರ್ಷದ ಆಚರಣೆ ಇರುವ ಹಿನ್ನೆಲೆ 5 ದಿನಗಳ ಕಾಲ ಸಮಾರಂಭ ಮಾಡಲು ಯೋಚಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುನ್ನೂರು ಕಾಪು ಸಮಾಜದ ಪ್ರಧಾನ ಕಾರ್ಯದರ್ಶಿ ಜಿ.ಬಸವರಾಜ ರೆಡ್ಡಿ, ಮುಖಂಡರಾದ ಎನ್‌.ಶ್ರೀನಿವಾಸ ರೆಡ್ಡಿ, ಪೋಗುಲ ಚಂದ್ರಶೇಖರರೆಡ್ಡಿ, ಕೆ.ನಾಗಿರೆಡ್ಡಿ, ಪ್ರತಾಪರೆಡ್ಡಿ, ಬಂಗಿ ನರಸರೆಡ್ಡಿ, ಪುಂಡ್ಲ ರಾಜೇಂದ್ರರೆಡ್ಡಿ, ಗುಡಿಸಿ ನರಸರೆಡ್ಡಿ, ಕೆ.ರಾಜೇಂದ್ರ ರೆಡ್ಡಿ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!