ಹಾವೇರಿ: ಗುಡುಗು-ಸಿಡಿಲು ಹಾಗೂ ಅಕಾಲಿಕ ಮಳೆಯ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತಗಳು ಮುನ್ನೆಚ್ಚರಿಕೆ ವಹಿಸಬೇಕು. ಸಿಡಿಲಿನ ಪರಿಣಾಮಗಳ ಕುರಿತಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮುಂಗಾರು ಮಳೆ-ಗಾಳಿ ಹಾಗೂ ಗುಡುಗು-ಸಿಡಿಲಿನ ಅವಘಡಗಳ ಮುನ್ನೆಚ್ಚರಿಕೆ ಸಿದ್ಧತೆಗಳು ಹಾಗೂ ಬೇಸಿಗೆ ಕುಡಿಯುವ ನೀರಿನ ಸ್ಥಿಗತಿಗಳ ಕುರಿತಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ತಾಲೂಕಾವಾರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುಂಗಾರು ಮಳೆಯ ವಿಪತ್ತುಗಳ ನಿರ್ವಹಣೆಗೆ ತಾಲೂಕಾವಾರು ಸಿದ್ಧತೆಗಳ ಕುರಿತಂತೆ ಚರ್ಚಿಸಿ ಲಿಖಿತವಾಗಿ ಮಾಹಿತಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.ಈ ವರ್ಷ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವುದಾಗಿ ಹವಾಮಾನ ಇಲಾಖೆ ಅಂದಾಜಿಸಿದೆ. ಮುಂಗಾರು ಮಳೆಯ ಪ್ರಾಕೃತಿಕ ಅವಘಡಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತಾಲೂಕಾವಾರು ವಿಪತ್ತು ಪರಿಹಾರ ಕ್ರಮಗಳ ಯೋಜಿತ ಸಿದ್ಧತೆಯನು ಮಾಡಿಕೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿನಿಂದಲೇ ರಾಜಕಾಲುವೆಗಳು ಒಳಗೊಂಡಂತೆ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಮಳೆ ನೀರು ನುಗ್ಗುವ ತಗ್ಗು ಪ್ರದೇಶಗಳನ್ನು ಗುರುತುಮಾಡಿಕೊಂಡು ಈ ಪ್ರದೇಶಗಳಲ್ಲಿ ನಿಗಾವಹಿಸಬೇಕು. ನದಿ, ಹಳ್ಳ ಹಾಗೂ ತಗ್ಗು ಪ್ರದೇಶ್ರ ಸೇರಿದಂತೆ ಮಳೆನೀರಿನಿಂದ ಬಾಧಿತವಾಗುವ ಪ್ರದೇಶಗಳನ್ನು ಗುರುತುಮಾಡಿಕೊಂಡು ಮಳೆಯ ಸಂದರ್ಭದಲ್ಲಿ ತೊಂದರೆಗೊಳಗಾದಾಗ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಹಾಗೂ ಕಾಳಜಿ ಕೇಂದ್ರಗಳನ್ನು ಆರಂಭಿಸಿ ಜನರ ರಕ್ಷಣೆಗೆ ಈಗಿನಿಂದಲೇ ಯೋಜಿತ ರೀತಿಯಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಕಾಳಜಿ ಕೇಂದ್ರಗಳನ್ನು ಗುರುತಿಸಿಕೊಳ್ಳಬೇಕು. ಪ್ರವಾಹದಂತಹ ಸಂದರ್ಭದಲ್ಲಿ ಜನರ ರಕ್ಷಣೆಗೆ ಅಗತ್ಯವಿರುವ ವಿಪತ್ತು ನಿರ್ವಹಣಾ ಉಪಕರಣಗಳು, ಈಜುಗಾರರು, ಬೋಟ್ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ದಳ ಸೇರಿದಂತೆ ರಕ್ಷಣಾ ಪಡೆಯ ನೆರವಿಗೆ ಸಂಪರ್ಕ ವ್ಯವಸ್ಥೆ ಒಳಗೊಂಡಂತೆ ಎಲ್ಲ ಸಿದ್ಧತೆಗಳ ಕುರಿತಂತೆ ಚರ್ಚಿಸಿ ಅಧಿಕಾರಿಗಳ ತಂಡಗಳನ್ನು ರಚಿಸಿ ಪೂರ್ವ ತಯಾರಿಯಲ್ಲಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ನೀರಿನಿಂದಾಗಿ ಕಳೆದ ಐದು ವರ್ಷಗಳಲ್ಲಿ ಕೆರೆಯ ದಡಗಳು ಒಡೆದು ಹೋಗುವುದು, ಕೋಡಿಯ ಮೂಲಕ ರಸ್ತೆಗೆ ನೀರು ಹರಿದು ಸಂಪರ್ಕ ಕಡಿತಗೊಂಡಿರುವ ಕುರಿತಾದ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಅಂತಹ ಪ್ರದೇಶಗಳ ನಿಗಾವಹಿಸಿ, ಕೆರೆ ತುಂಬಿ ರಸ್ತೆಗೆ ನೀರು ಹರಿಯುವ ಸನ್ನಿವೇಶ ಸೃಷ್ಟಿಯಾದರೆ ಯಾವುದೇ ಅವಘಡಗಳಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರಿಕೇಡ್ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚಾರ ಸುಗಮಗೊಳಿಸಲು ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿದರು.ಹೆದ್ದಾರಿ ಹಾಗೂ ರೈಲ್ವೆ ಕೆಳಸೇತುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಗಳು ರೈಲ್ವೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದರು.ಕೆರೆ ತುಂಬಿಸಿ:ಮುಂಬರುವ ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಈ ಮಳೆಗಾಲದಲ್ಲಿ ಯೋಜಿತ ರೀತಿಯಲ್ಲಿ ಕಾಲ ಮಿತಿಯೊಳಗೆ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕು. ಈ ನಿಟ್ಟಿನಲ್ಲಿ ತುಂಗಾ ಮೇಲ್ದಂಡೆ ಯೋಜನೆ ಅಭಿಯಂತರರು ಸೂಕ್ತ ಯೋಜನೆಯನ್ನು ಹಾಕಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇದೇ ಗುರುವಾರ ಪ್ರತ್ಯೇಕ ಸಭೆ ನಡೆಸಲಾಗುವುದು. ಅಗತ್ಯ ಮಾಹಿತಿಯೊಂದಿಗೆ ಹಾಜರಾಗಲು ಅಭಿಯಂತರರಿಗೆ ಸೂಚನೆ ನೀಡಿದರು.ಮುಂಗಾರು ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬೀಳುವುದು, ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಸಂಪರ್ಕ ಕಡಿತಗೊಂಡರೆ ತುರ್ತಾಗಿ ಸ್ಪಂದಿಸಿ ಕ್ರಮವಹಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ ಬೇಸಿಗೆ ಕುಡಿಯುವ ನೀರಿಗಾಗಿ ಹೊಸ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಹಾಗೂ ಬಾಡಿಗೆ ಆಧಾರದ ಮೇಲೆ ಖಾಸಗಿ ಕೊಳವೆಬಾವಿಗಳಿಗೆ ಪಂಪ್ ಅಳವಡಿಸುವಾಗ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪತ್ರ ನೀಡಲು ನಿರ್ದೇಶನ ನೀಡಿದರು.ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಪ್ರಸ್ತುತ ಸ್ಥಿತಿಗತಿಗಳ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಬಾಡಿಗೆ ಆಧಾರದ ಮೇಲೆ ಪಡೆದಿರುವ ಖಾಸಗಿ ಕೊಳವೆಬಾವಿಗಳ ಬಾಡಿಗೆ ಹಣವನ್ನು ಎರಡು ದಿನದಲ್ಲಿ ಪಾವತಿ ಮಾಡಿ ಎಂದು ತಹಸೀಲ್ದಾರಗಳಿಗೆ ಸೂಚನೆ ನೀಡಿದರು.ಹಾವೇರಿ ನಗರಕ್ಕೆ ಹೆಗ್ಗೇರಿ ಕೆರೆಯಿಂದ ಬಳಕೆಗಾಗಿ ಪೂರೈಸುತ್ತಿರುವ ನೀರನ್ನು ಒಪ್ಪಂದ ಪ್ರಕಾರ ಪ್ರತಿ ದಿನ ಎಂಟು ಎಂ.ಎಲ್.ಡಿ.ಪಂಪ್‌ಮಾಡಿ ಪೂರೈಸಬೇಕು. ಎರಡುದಿನದೊಳಗಾಗಿ ಈ ನಿಟ್ಟಿನಲ್ಲಿ ಗುತ್ತಿಗೆದಾರನಿಗೆ ಸೂಕ್ತ ನಿರ್ದೇಶನ ನೀಡಿ ಪಂಪ್‌ಹೌಸ್‌ಗೆ ಸರಾಗವಾಗಿ ನೀರು ಹರಿದುಬರುವ ನಿಟ್ಟಿನಲ್ಲಿ ಹೂಳು ತೆಗೆಸಲು ಪೌರಾಯುಕ್ತರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ನಗರ ನೀರು ಪೂರೈಕೆ ವ್ಯವಸ್ಥೆ ಕುರಿತಂತೆ ಬುಧವಾರ ಪ್ರತ್ಯೇಕ ಸಭೆ ಕರೆಯಲಾಗುವುದು. ಎಲ್ಲ ಮಾಹಿತಿಗಳೊಂದಿಗೆ ಹಾಜರಾಗಿ ಎಂದು ಸೂಚನೆ ನೀಡಿದರು.ಬೇಸಿಗೆ ಕುಡಿಯುವ ನೀರಿಗಾಗಿ ತೆರೆಯಲಾದ ಸಹಾಯವಾಣಿಗಳಿಗೆ ಬರುವ ಕರೆಗಳ ಸ್ವೀಕಾರದಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆ ಕುರಿತಂತೆ ನಿಗಾವಹಿಸಿ. ಸಹಾಯವಾಣಿಯಲ್ಲಿ ಕರೆಗಳನ್ನು ಸ್ವೀಕಸುತ್ತಿಲ್ಲ ಎಂದು ಸಾರ್ವಜನಿಕರಿಂದ ಯಾವುದೇ ದೂರು ಬರಬಾರದು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ಉಪವಿಭಾಗಾಧಿಕಾರಿ ಚೆನ್ನಪ್ಪ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಸತೀಶ ಸಂತಿ, ತಾಲೂಕಿನ ಎಲ್ಲ ತಹಸೀಲ್ದಾರಗಳು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು, ಕುಡಿಯುವ ನೀರು ಸರಬರಾಜು ಇಲಾಖೆ ಅಭಿಯಂತರರು, ಸಣ್ಣ ನೀರಾವರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಅಭಿಯಂತರರು, ಇತರರು ಉಪಸ್ಥಿತರಿದ್ದರು