ಗದಗ ಜಿಲ್ಲೆಯಲ್ಲಿ ಮುಂಗಾರು ವೈಫಲ್ಯ: ಒಣಗಿದ ರೈತರ ಬೆಳೆ!

KannadaprabhaNewsNetwork |  
Published : Jul 29, 2026, 02:15 AM IST
ಒಣಗುತ್ತಿರುವ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಎಡೆಹೊಡೆಯುತ್ತಿರುವುದು.  | Kannada Prabha

ಸಾರಾಂಶ

ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 313719 ಹೆಕ್ಟೇರ್ ಬಿತ್ತನೆ ಗುರಿ ನಿಗದಿಯಾಗಿತ್ತು. ಆರಂಭಿಕ ಮಳೆಯ ನೆರವಿನಿಂದ 257401 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿತು.

ಶಿವಕುಮಾರ ಕುಷ್ಟಗಿ

ಗದಗ: ಮುಂಗಾರು ಆರಂಭದಲ್ಲಿ ಸುರಿದ ಉತ್ತಮ ಮಳೆ ಆಧರಿಸಿ ಬಿತ್ತನೆ ಮಾಡಿದ್ದ ಸಾವಿರಾರು ರೈತರಿಗೀಗ ಜುಲೈ ಅಂತ್ಯದವರೆಗೂ ಮಳೆಯಾಗದೇ ಇರುವುದರಿಂದಾಗಿ ಹೊಲಗಳಲ್ಲಿ ಹಸಿರಾಗಿರಬೇಕಿದ್ದ ಬೆಳೆಗಳು ಒಣಗಿದ್ದು, ಮತ್ತೊಮ್ಮೆ ಪರ್ಯಾಯ ಬೆಳೆ ಬಿತ್ತನೆಗೂ ರೈತರು ಹಿಂದೇಟು ಹಾಕುತ್ತಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 313719 ಹೆಕ್ಟೇರ್ ಬಿತ್ತನೆ ಗುರಿ ನಿಗದಿಯಾಗಿತ್ತು. ಆರಂಭಿಕ ಮಳೆಯ ನೆರವಿನಿಂದ 257401 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿತು. ಆದರೆ ನಂತರ ಮಳೆಯ ಕೊರತೆಯಿಂದ ಬೆಳೆಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಂಡಿದ್ದು, ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳಲ್ಲಿ ಶೇ. 75ರಷ್ಟು ಹಾನಿ ಸಂಭವಿಸುವ ಅಂದಾಜಿಸಿದೆ.

ಆರ್ಥಿಕ ಹೊಡೆತ: ಜಿಲ್ಲೆಯ ಕೃಷಿ ಆರ್ಥಿಕತೆಯ ಮೇಲೆಯೇ ದೊಡ್ಡ ಹೊಡೆತವಾಗಿದೆ. ಜಿಲ್ಲೆಯ 465715 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣದಲ್ಲಿ 393193 ಹೆಕ್ಟೇರ್ ಸಾಗುವಳಿ ಭೂಮಿಯಿದ್ದು, ಕೇವಲ 75380 ಹೆಕ್ಟೇರ್ ಮಾತ್ರ ನೀರಾವರಿ ವ್ಯಾಪ್ತಿಯಲ್ಲಿದೆ. ಉಳಿದ ಭೂಮಿ ಸಂಪೂರ್ಣ ಮಳೆ ಆಶ್ರಿತವಾಗಿರುವುದರಿಂದ ಮುಂಗಾರು ವೈಫಲ್ಯ ನೇರವಾಗಿ ರೈತರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ.

1.79 ಲಕ್ಷ ರೈತರಿದ್ದಾರೆ: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ 179116 ರೈತರಿದ್ದಾರೆ. ಇವರಲ್ಲಿ ಅತಿ ಸಣ್ಣ ಹಾಗೂ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮಳೆ ವೈಫಲ್ಯ ಅವರ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಜುಲೈ ತಿಂಗಳಲ್ಲಿ 36.4 ಮಿಮೀ ವಾಡಿಕೆ ಮಳೆಯಾಬೇಕಿತ್ತು. ಆದರೆ 21.6 ಮಿಮೀ ಮಾತ್ರ ದಾಖಲಾಗಿದೆ. ಜನವರಿಯಿಂದ ಜು. 15ರ ವರೆಗೆ 229.5 ಮಿಮೀ ಮಳೆಯಾಗಬೇಕಿದ್ದರೆ, ವಾಸ್ತವವಾಗಿ 187.2 ಮಿಮೀ ಮಾತ್ರ ಸುರಿದಿದೆ.

ಮಳೆ ಕೊರತೆಯ ಚಿತ್ರಣ: ಜುಲೈ ವಾಡಿಕೆ ಮಳೆ 36.4 ಮಿಮೀ, ಜುಲೈನಲ್ಲಿ ಸುರಿದ ಮಳೆ 21.6 ಮಿಮೀ, ಜನವರಿಯಿಂದ ಜುಲೈ 15ರ ವರೆಗಿನ ವಾಡಿಕೆ ಮಳೆ 229.5 ಮಿಮೀ ವಾಸ್ತವ ಮಳೆ 187.2 ಮಿಮೀ, ಬೆಳೆಹಾನಿ ಸುಮಾರು ಶೇ. 75.ರೈತರಿಗೆ ಸಲಹೆ: ಬರದ ಪರಿಸ್ಥಿತಿ ಮತ್ತು ಆಗಸ್ಟ್‌ ಮೊದಲ ವಾರದಲ್ಲಿ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆ ಕೃಷಿ ಇಲಾಖೆ ಕಡಿಮೆ ಅವಧಿಯ ಹಾಗೂ ಕಡಿಮೆ ನೀರು ಬೇಕಾಗುವ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡಿದೆ. ಆದರೆ ರೈತರ ಮನಸ್ಥಿತಿ ಬೇರೆಯದೇ ಆಗಿದೆ. ಒಮ್ಮೆ ಸುಟ್ಟ ಕೈ ಮತ್ತೆ ಬೆಂಕಿಗೆ ಹೋಗುವುದಿಲ್ಲ ಎಂಬಂತೆ, ಮತ್ತೊಮ್ಮೆ ಸಾಲ ಮಾಡಿ ಬೀಜ ಖರೀದಿಸಿ ನಷ್ಟ ಅನುಭವಿಸುವ ಬದಲು ಈ ಮುಂಗಾರನ್ನು ಪಾಳು ಬಿಟ್ಟಿದ್ದಾರೆ. ಮೊದಲ ಬಿತ್ತನೆಗೆ ಹಾಕಿದ ಹಣವೇ ಮರಳಿ ಬರಲಿಲ್ಲ. ಮತ್ತೆ ಸಾಲ ಮಾಡಿ ಪರ್ಯಾಯ ಬೆಳೆ ಬಿತ್ತಿದರೂ ಮಳೆ ಬರುತ್ತದೆ ಎಂಬ ಖಾತರಿ ಇಲ್ಲ. ಆದ್ದರಿಂದ ಮರು ಬಿತ್ತನೆ ಮಾಡದೇ ಜಮೀನನ್ನು ಸಂಪೂರ್ಣ ಪಾಳು ಬಿಟ್ಟಿದ್ದೇವೆ ಎಂದು ರೈತರಾದ ಮಂಜುನಾಥ ಪೂಜಾರ, ಸಿದ್ದಪ್ಪ ತಳವಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶಕ್ಕಾಗಿ ಸೇವೆ ಮಾಡಲು ಸದಾ ಸಿದ್ಧರಾಗಿ: ಎ.ಬಿ. ಹೆಸರೂರ
ಸೂಡಿ ಗ್ರಾಮ ಪಂಚಾಯಿತಿ ಎದುರು ಕಸ ಸುರುವಿ ಆಕ್ರೋಶ