ಮುಂಗಾರು ಮಳೆ ಕೊರತೆ: ಬೆಳೆ ವೀಕ್ಷಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ

KannadaprabhaNewsNetwork |  
Published : Jul 26, 2026, 02:15 AM IST
ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದ ಬಳಿಯ ಕೃಷಿ ಜಮೀನುಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಅವರು ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು. | Kannada Prabha

ಸಾರಾಂಶ

ಹಲಕುಂದಿ, ಮಿಂಚೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ 25 ದಿನಗಳಿಂದ ಹನಿಯೂ ಮಳೆಯಾಗಿಲ್ಲ.

ಬಳ್ಳಾರಿ: ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಬಳ್ಳಾರಿ ತಾಲೂಕಿನ ಹಲಕುಂದಿ, ಮಿಂಚೇರಿ ಹಾಗೂ ಸಂಜಿರಾಯನಕೋಟೆ ಗ್ರಾಮಗಳ ಕೃಷಿ ಜಮೀನುಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.

ಜಮೀನಿನಲ್ಲಿ ಬಿತ್ತನೆಯಾಗಿರುವ ತೊಗರಿ, ಹತ್ತಿ, ಸಜ್ಜೆ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಪರಿಶೀಲಿಸಿ, ರೈತರಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಕುಂದಿ, ಮಿಂಚೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ 25 ದಿನಗಳಿಂದ ಹನಿಯೂ ಮಳೆಯಾಗಿಲ್ಲ. ಶೇ.80ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿರುವ ತೊಗರಿ, ಸೂರ್ಯಕಾಂತಿ ಹಾಗೂ ಹತ್ತಿ ಬೆಳೆಗಳು ತೇವಾಂಶ ಅಭಾವದಿಂದ ಬಳಲುತ್ತಿವೆ. ಶೇ.100ರಷ್ಟು ಬೆಳೆಯಬೇಕಿದ್ದ ಜಾಗದಲ್ಲಿ ಕೇವಲ ಶೇ.30ರಷ್ಟು ಮಾತ್ರ ಬೆಳೆದಿದೆ. ಎಲ್‌ ನಿನೋ ಪರಿಣಾಮದಿಂದ ಜಲಾನಯನ ಪ್ರದೇಶಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿಗೂ ಹೆಚ್ಚು ನೀರಿತ್ತು. ಆದರೆ ಪ್ರಸ್ತುತ ಕೇವಲ 28 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಕಾಲುವೆಗೆ ನೀರು ಬಿಡುಗಡೆಯಾಗದ ಕಾರಣ ಸಿರುಗುಪ್ಪ, ಕಂಪ್ಲಿ ಮತ್ತು ಬಳ್ಳಾರಿ ಭಾಗದಲ್ಲಿ ಭತ್ತದ ಬಿತ್ತನೆ ಸಾಧ್ಯವಾಗಿಲ್ಲ. ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಆದೇಶದಂತೆ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಕ್ಷೇತ್ರ ಭೇಟಿ ಪರಿಶೀಲನೆ ನಡೆಸುತ್ತಿದ್ದು, ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು. ಕೇಂದ್ರದ ಡ್ರಾಟ್‌ ಮಾನಿಟರಿಂಗ್‌ ಸೆಲ್‌‍ ಮೂಲಕ ಹವಾಮಾನ ದತ್ತಾಂಶ, ಒಣಹವೆ ಆಧಾರದ ಮೇಲೆ ಡ್ರಾಟ್‌ ಟ್ರಿಗರ್‌ ನಿಯಮಾವಳಿಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಸ್ಪಾಂಜ್‌ ಐರನ್‌ ಕಾರ್ಖಾನೆ ಧೂಳಿನಿಂದ ಬೆಳೆ ನಷ್ಟ ಮತ್ತು ಸಾರ್ವಜನಿಕರ ಉಸಿರಾಟದ ತೊಂದರೆ ಕುರಿತು ಸ್ಪಂದಿಸಿದ ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅವರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತನಿಖಾ ವರದಿ ಬಂದ ತಕ್ಷಣ ಕಾನೂನು ಹಾಗೂ ನ್ಯಾಯಾಲಯದ ವ್ಯಾಪ್ತಿಯಲ್ಲಿ ರೈತರ ಹಿತರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಂ. ಸೋಮಸುಂದರ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ್‌, ಉಪ ನಿರ್ದೇಶಕ ಎಸ್‌‍.ಎನ್‌.ಮಂಜುನಾಥ್‌, ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ, ತಹಶೀಲ್ದಾರ್‌ ಟಿ.ರೇಖಾ, ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ ಮರುಕಳಿಸದಂತೆ ಕಠಿಣ ಕ್ರಮ: ಜೋಶಿ
ಬರಗಾಲದ ಬೇಗೆಯಲ್ಲಿ ತೋಟಗಾರಿಕೆ ಬೆಳೆಗಾರರು ಕಂಗಾಲು