ಮುಂಗಾರು ಮಳೆ ಆರಂಭ, ತೆಂಗು ನಾಟಿ ಸಿದ್ಧತೆಗೆ ಸಕಾಲ

KannadaprabhaNewsNetwork | Updated : May 08 2025, 12:55 PM IST
Follow Us

ಸಾರಾಂಶ

ಮುಂಗಾರು ಮಳೆ ಆರಂಭವಾಗಿದ್ದು ತೆಂಗು ನಾಟಿಗೆ ಸಕಾಲವಾಗಿದೆ ಎಂದು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಕೀರ್ತಿ ಶಂಕರ್ ತಿಳಿಸಿದ್ದಾರೆ.

  ತಿಪಟೂರು : ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ತೆಂಗು ಒಂದಾಗಿದ್ದು ತೆಂಗು ಪ್ರದೇಶ ಮತ್ತು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು ತೆಂಗು ನಂಬಿ ಇಲ್ಲಿನ ಸಾವಿರಾರು ರೈತರು ಜೀವನ ಕಟ್ಟಿಕೊಂಡಿದ್ದು ಈಗ ಮುಂಗಾರು ಮಳೆ ಆರಂಭವಾಗಿದ್ದು ನಾಟಿಗೆ ಸಕಾಲವಾಗಿದೆ ಎಂದು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಕೀರ್ತಿ ಶಂಕರ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ಪ್ರಸ್ತುತ ವರ್ಷ ಮುಂಗಾರು ಮಳೆ ಆರಂಭವಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ತೆಂಗಿನ ಸಸಿಗಳನ್ನು ನಾಟಿ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ತೆಂಗನ್ನು ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದಾಗಿದ್ದು ನೀರು ಬಸಿದು ಹೋಗುವ ಆಳವಾದ ಮರಳು ಮಿಶ್ರಿತ ಗೋಡು, ಜಂಬಿಟ್ಟಿಗೆ ಮತ್ತು ಕೆಂಪು ಗೋಡು ಮಣ್ಣುಗಳು ತೆಂಗನ್ನು ಬೆಳೆಯಲು ಯೋಗ್ಯವಾಗಿದೆ. 

ಜೇಡಿಮಣ್ಣು ಮತ್ತು ನೀರು ಬಸಿದು ಹೋಗದಿರುವ ಪ್ರದೇಶಗಳಲ್ಲಿ ತೆಂಗು ಹುಲುಸಾಗಿ ಬೆಳೆಯುವುದಿಲ್ಲ. ಮಣ್ಣಿನಲ್ಲಿ ೧.೫೦ ಮೀ. ಆಳದವರೆಗೆ ಯಾವುದೇ ತರಹದ ಹಾಸಿದ ಬಂಡೆಗಳಾಗಲಿ, ಗಟ್ಟಿತನದ ಮಣ್ಣಾಗಲಿ ಇರಬಾರದು. ತೆಂಗು ಉಷ್ಣವಲಯದ ಬೆಳೆಯಾಗಿದ್ದು, ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಬಯಸುತ್ತದೆ ಮತ್ತು ಉಷ್ಣಾಂಶ 15 ರಿಂದ 27 ಸೆ. ಇರುವ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. 

ತಿಪಟೂರಿನ ಸ್ಥಳೀಯ ತಳಿ ತಿಪಟೂರ್ ಟಾಲ್, ವೆಸ್ಟ್ ಕೋಸ್ಟ್ ಟಾಲ್, ಅಂಡಮಾನ್ ಆರ್ಡಿನರಿ, ಕೇರ ಕೇರಳಂ, ಕಲ್ಪ ಪ್ರತಿಭ, ಕಲ್ಪಮಿತ್ರ, ಕೇರ ಚಂದ್ರ ಮತ್ತು ಚಂದ್ರ ಕಲ್ಪಾ ಎತ್ತರದ ತಳಿಗಳಾಗಿದ್ದು, 30  30  ಅಡಿ ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ 5 ರಿಂದ 6  ವರ್ಷಗಳಲ್ಲಿ ಗಿಡಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಈ ಕಾಯಿಗಳು ಉತ್ತಮ ದರ್ಜೆಯ ಕೊಬ್ಬರಿ, ಜೊತೆಗೆ ಎಣ್ಣೆ ಅಂಶವನ್ನು ಹೊಂದಿರುತ್ತವೆ. ಗಂಗ ಬೊಂಡಂ, ಕೇಸರಿ ಚೌಘಾಟ್ ಗಿಡ್ಡ, ಹಸಿರು ಚೌಘಾಟ್ ಗಿಡ್ಡ, ಕೇಸರಿ ಮಲಯನ್ ಗಿಡ್ಡ, ಹಸಿರು ಮಲಯನ್ ಗಿಡ್ಡ, ಹಳದಿ ಮಲಯನ್ ಗಿಡ್ಡ ಮತ್ತು ಕೇಸರಿ ಮಲಯನ್ ಗಿಡ್ಡ ತಳಿಗಳು ತಳಿಗಳಾಗಿದ್ದು, ೨೫ಇಂಟು೨೫ ಅಡಿ ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ 3 ರಿಂದ 4 ವರ್ಷಗಳಲ್ಲಿ ಗಿಡಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಎಳನೀರು ಉತ್ಪಾದನೆಗೆ ಸೂಕ್ತವಾದ ತಳಿಗಳು. ಸಸಿ ನಾಟಿ ಮಾಡುವ ವಿಧಾನ:

ಭೂಮಿಯನ್ನು ಉಳುಮೆ ಮಾಡಿ ತಯಾರಿಡಬೇಕು. ತಳಿಗೆ ಅನುಗುಣವಾಗಿ ಶಿಫಾರಸ್ಸು ಮಾಡಿದ ಅಂತರದಲ್ಲಿ ಒಂದು ಘನ ಮೀಟರ್ ಅಳತೆಯ ಗುಣಿಗಳನ್ನು ತೆಗೆಯಬೇಕು. ಗುಣಿಗಳಿಗೆ ಹಸಿರೆಲೆ, ಕೊಟ್ಟಿಗೆ ಗೊಬ್ಬರ , ಬೇವಿನಹಿಂಡಿ ಮತ್ತು ಮೇಲ್ಮಣ್ಣಿನಿಂದ ೦.೬೦ ಘನ ಮೀಟರ್ ವರೆಗೆ ತುಂಬಬೇಕು. ಮಣ್ಣಿನ ಗುಣ ಧರ್ಮಕ್ಕೆ ಅನುಗುಣವಾಗಿ ೪೫ ಸೆಂ.ಮೀ. ಆಳದಲ್ಲಿ ಸಸಿಗಳನ್ನು ನಾಟಿ ಮಾಡಿ ಕೋಲಿನಿಂದ ಆಧಾರವನ್ನು ಕೊಡಬೇಕು. ಬೇಸಿಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೆರಳನ್ನು ಒದಗಿಸಬೇಕು. ಗೆದ್ದಲಿನ ಹತೋಟಿಗೆ ಪ್ರತಿ ಗುಣಿಗೆ 10  ಗ್ರಾಂ ಕ್ಲೊರೋಫೈರಿಫಾಸ್ ಹರಳುಗಳನ್ನು ನಾಟಿ ಸಮಯದಲ್ಲಿ ಗುಣಿಗಳಿಗೆ ಹಾಕಬೇಕು. ಪ್ರಾರಂಭಿಕ ಹಂತದಲ್ಲಿ ಗಿಡದ ಸುತ್ತ ಪಾತಿ ಮಾಡಿ ಪ್ರತಿ 2- 3 ದಿನಕ್ಕೊಮ್ಮೆ 15 - 20 ಲೀ. ನೀರನ್ನು ಕೊಡಬೇಕು. 

ತೆಂಗಿನ ಸಸಿಗಳ ಸುತ್ತ ಅಥವಾ ಸಾಲುಗಳ ನಡುವೆ ಹುರುಳಿ, ಸೆಣಬು, ಡಯಾಂಚ ಮತ್ತು ಅಫ್ ಸೆಣಬು ಬಿತ್ತನೆ ಬೀಜಗಳನ್ನು ಬಳಸಿ ತೆಂಗಿನ ತಾಕುಗಳಲ್ಲಿ ಹೊದಿಕೆ ಬೆಳೆಗಳಾಗಿ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯುವುದರಿಂದ ವಾತಾವರಣದಲ್ಲಿ ಲಭ್ಯವಿರುವ ಸಾರಜನಕವನ್ನು ಬೇರುಗಳಲ್ಲಿ ಸ್ಥಿರೀಕರಿಸಿ ಮರಗಳ ಉಪಯೋಗಕ್ಕೆ ವರ್ಗಾಯಿಸುವ ಸಾಮರ್ಥ್ಯವಿರುತ್ತದೆ. ಇದರಿಂದ ಮಳೆ ನೀರು ಮಣ್ಣಿಗೆ ಹೆಚ್ಚಾಗಿ ಸೇರಲು ಅನುಕೂಲ ಮಾಡಿಕೊಡುತ್ತದೆ. ಆ ಮೂಲಕ ತಾಕಿನ ಮಣ್ಣಿನಲ್ಲಿ ಅಧಿಕ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ವೃದ್ಧಿಸುತ್ತದೆ ಎಂದು ತಿಳಿಸಿದ್ದು, ತೆಂಗಿನ ಗಿಡಗಳ ಮದ್ಯೆ ಮಿಶ್ರಬೆಳೆಗಳ ಬೆಳೆಯುವ ಬಗ್ಗೆ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗೆ ಕೊನೇಹಳ್ಳಿ ಕೃಷಿ ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.