ಸಾರಾಂಶ
ರಾಜಭವನ, ಸರ್ಕಾರದ ನಡುವಿನ ಸಂಘರ್ಷ ಮುಂದುವರಿದಿದ್ದು, ಕೆರೆಗಳ ವಿಸ್ತೀರ್ಣಕ್ಕನುಗುಣವಾಗಿ ಬಫರ್ ವಲಯ ಮರು ನಿಗದಿ ಮಾಡುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ರಾಜ್ಯಪಾಲರು, ಅಂಕಿತ ಹಾಕದೇ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಬೆಂಗಳೂರು : ರಾಜಭವನ, ಸರ್ಕಾರದ ನಡುವಿನ ಸಂಘರ್ಷ ಮುಂದುವರಿದಿದ್ದು, ಕೆರೆಗಳ ವಿಸ್ತೀರ್ಣಕ್ಕನುಗುಣವಾಗಿ ಬಫರ್ ವಲಯ ಮರು ನಿಗದಿ ಮಾಡುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ರಾಜ್ಯಪಾಲರು, ಅಂಕಿತ ಹಾಕದೇ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.
ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೇ ಅನುಮೋದನೆಗೊಂಡ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರು ಸ್ಪಷ್ಟೀಕರಣ ಕೋರಿ ಹಿಂದಕ್ಕೆ ಕಳುಹಿಸಿದ್ದಾರೆ. ವಿಧೇಯಕಕ್ಕೆ ಅನುಮೋದನೆ ನೀಡದಂತೆ ಬೆಂಗಳೂರು ಟೌನ್‌ಹಾಲ್ ಅಸೋಸಿಯೇಷನ್ ರಾಜ್ಯಪಾಲರ ಕಚೇರಿಗೆ ಆಕ್ಷೇಪಣೆ ಸಲ್ಲಿಸಿದ ಆಧಾರದಲ್ಲಿ ವಿಧೇಯಕವನ್ನು ವಾಪಸ್ ಕಳುಹಿಸಲಾಗಿದೆ.
ಬೆಂಗಳೂರು ಟೌನ್‌ಹಾಲ್ ಅಸೋಸಿಯೇಷನ್ ಆಕ್ಷೇಪಣೆಯಲ್ಲಿ, ತಜ್ಞರ ಅಭಿಪ್ರಾಯದಂತೆ ಪ್ರಸ್ತುತ 30 ಮೀಟರ್ ಬಫರ್ ವಲಯ ಕೂಡ ಸಾಲುವುದಿಲ್ಲ. ಅದರ ಬದಲು ಪರಿಸರ ಸಮತೋಲನ ಕಾಪಾಡಲು 300 ಮೀ.ನಷ್ಟು ಬಫರ್ ವಲಯ ನಿಗದಿ ಮಾಡುವಷ್ಟು ಅವಶ್ಯಕತೆಯಿದೆ ಎಂದು ತಿಳಿಸಲಾಗಿದೆ. ಹೀಗಾಗಿ ಬಫರ್ ವಲಯವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಬೇಕು ಎಂದು ತಿಳಿಸಿದೆ.
ಅಲ್ಲದೆ, ವಿಧೇಯಕ ತಿದ್ದುಪಡಿಗೂ ಮುನ್ನ ತಜ್ಞರೊಂದಿಗೆ ಸಮಾಲೋಚಿಸಿಲ್ಲ ಎಂದು ಭಾಸವಾಗುತ್ತಿದೆ. ವಿಧೇಯಕಕ್ಕೆ ತಿದ್ದುಪಡಿ ತಂದಿರುವುದು ಸಂವಿಧಾನ ಮತ್ತು ಕಾನೂನಿನ ಉಲ್ಲಂಘನೆ. ನಾಗರಿಕರ ಜಲ ಭದ್ರತೆ ಮತ್ತು ಆರೋಗ್ಯಕರ ಪರಿಸರಕ್ಕೆ ಹಾನಿಯನ್ನುಂಟು ಮಾಡುವಂತಿದೆ ಎಂದು ಬೆಂಗಳೂರು ಟೌನ್‌ಹಾಲ್ ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.
ಬೆಂಗಳೂರು ಟೌನ್‌ಹಾಲ್ ಅಸೋಸಿಯೇಷನ್ ಎತ್ತಿರುವ ಈ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಬೇಕು. ಅಲ್ಲದೆ, ವಿಧೆಯಕದ ತಿದ್ದುಪಡಿಯು ಪರಿಸರ ಮತ್ತು ಜಲಮೂಲದ ಮೇಲೆ ಪ್ರತಿಕೂಲದ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಬೇಕಿದೆ. ಅದಕ್ಕಾಗಿ ಸಮರ್ಪಕ ಸ್ಪಷ್ಟೀಕರಣದೊಂದಿಗೆ ಮರು ಸಲ್ಲಿಕೆ ಮಾಡುವಂತೆ ಸೂಚಿಸಿ ರಾಜ್ಯಪಾಲರು ವಿಧೇಯಕವನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ವಿಧೇಯಕದಲ್ಲೇನಿದೆ?:
ಕೆರೆಗಳ ಬಫರ್ ವಲಯವನ್ನು 30 ಮೀ. ಬದಲಿಗೆ ಆಯಾ ಕೆರೆಗಳ ವಿಸ್ತೀರ್ಣಕ್ಕನುಗುಣವಾಗಿ ನಿಗದಿ ಮಾಡಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಅದರಂತೆ 5 ಗುಂಟೆ ವಿಸ್ತೀರ್ಣದ ಕರೆಗಳಿಗೆ 0 ಮೀ. ಬಫರ್ ವಲಯ, 5 ಗುಂಟೆಯಿಂದ 1 ಎಕರೆ ವಿಸ್ತೀರ್ಣದ ಕರೆಗಳಿಗೆ 3 ಮೀ., 1ರಿಂದ 10 ಎಕರೆ ಕರೆಗಳಿಗೆ 6 ಮೀ. 10ರಿಂದ 25 ಎಕರೆ ಕೆರೆಗಳಿಗೆ 12 ಮೀ., 25ರಿಂದ 100 ಎಕರೆ ಕೆರೆಗಳಿಗೆ 24 ಮೀ. ಹಾಗೂ 100 ಎಕರೆಗಿಂತ ದೊಡ್ಡ ಕೆರೆಗಳಿಗೆ 30 ಮೀ. ಬಫರ್ ವಲಯ ನಿಗದಿ ಮಾಡುವ ಅಂಶ ವಿಧೇಯಕದಲ್ಲಿದೆ. ಅಲ್ಲದೆ, ಈ ಬಫರ್ ವಲಯದಲ್ಲಿ ರಸ್ತೆ, ಸೇತುವೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳಲೂ ಅವಕಾಶ ಕಲ್ಪಿಸಲಾಗುತ್ತಿದೆ.
ಏನಿದು ಸಮಸ್ಯೆ?
- ಕೆರೆ ವಿಸ್ತೀರ್ಣಕ್ಕನುಗುಣವಾಗಿ ಬಫರ್ ಝೋನ್ ನಿಗದಿ ಮಾಡಲಾಗಿತ್ತು
- ಇದು ಸರಿಯಲ್ಲ, 300 ಮೀ. ಬಫರ್ ವಲಯ ಅಗತ್ಯ ಎಂದು ದೂರು
- ರಾಜ್ಯಪಾಲರಿಗೆ ಸಂಘವೊಂದರ ದೂರು. ಇದನ್ನು ಪರಿಗಣಿಸಿದ ಗೌರ್ನರ್
- ಅಂಕಿತ ಹಾಕದೇ ಗೆಹಲೋತ್‌ರಿಂದ ಸರ್ಕಾರಕ್ಕೇ ಮಸೂದೆ ವಾಪಸ್