ಸಾರಾಂಶ
ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯ ದೊಡ್ಡನಾಗಮಂಗಲ ಗ್ರಾಮದಲ್ಲಿನ ಕೆರೆಯ ಎರಡು ಎಕರೆ ಜಾಗ ಒತ್ತುವರಿ ಮಾಡಿಕೊಂಡು ರಚಿಸಿದ್ದ ಲೇಔಟ್‌ನಲ್ಲಿ ನಿರ್ಮಿಸಿದ್ದ ಸುಮಾರು 20 ಮನೆಗಳ ನೆಲಸಮ
ಬೆಂಗಳೂರು : ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯ ದೊಡ್ಡನಾಗಮಂಗಲ ಗ್ರಾಮದಲ್ಲಿನ ಕೆರೆಯ ಎರಡು ಎಕರೆ ಜಾಗ ಒತ್ತುವರಿ ಮಾಡಿಕೊಂಡು ರಚಿಸಿದ್ದ ಲೇಔಟ್‌ನಲ್ಲಿ ನಿರ್ಮಿಸಿದ್ದ ಸುಮಾರು 20 ಮನೆಗಳನ್ನು ಬೆಂಗಳೂರು ನಗರ ಜಿಲ್ಲಾಡಳಿತ ಗುರುವಾರ ತೆರವು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದೆ.
ಅಕ್ರಮವಾಗಿ ಬಡಾವಣೆ ನಿರ್ಮಿಸಿ ಮಾರಾಟ ಮಾಡಿ, ಹಾಲಿ ವಿದೇಶ ಪ್ರವಾಸದಲ್ಲಿರುವ ಬಿಲ್ಡರ್ ರಾಮರೆಡ್ಡಿ ವಿರುದ್ಧ ಜಿಲ್ಲಾಡಳಿತ ಕ್ರಿಮಿನಲ್ ಕೇಸ್ ದಾಖಲಿಸಿದೆ. ಬಿಲ್ಡರ್ ರಾಮರೆಡ್ಡಿ ಎಂಬಾತ ಲೇಔಟ್ ರಚಿಸಿ, ಹಲವು ಸೈಟ್‌ಗಳನ್ನು ಮಾಡಿ ಮಾರಾಟ ಮಾಡಿದ್ದಾನೆ. ಕಡಿಮೆ ಬೆಲೆಗೆ ಸೈಟ್ ಸಿಕ್ಕಿದೆ ಎಂದು ದಾಖಲೆ ಪರಿಶೀಲಿಸದೆ ಅನೇಕರು ಖರೀದಿಸಿದ್ದಾರೆ. ಕೆರೆ ಒತ್ತುವರಿಯನ್ನು ಗಮನಿಸಿದ ಇಲಾಖೆಯ ಅಧಿಕಾರಿಗಳು, ಯಾವುದೇ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಂತೆ ಖರೀದಿದಾರರಿಗೆ ಎಚ್ಚರಿಕೆ ನೀಡಿದ್ದರು. ಆದರೂ, ಕೆಲವರು ಮನೆ ಕಟ್ಟಿದ್ದರು. ಹೀಗಾಗಿ, ಜೆಸಿಬಿ ಬಳಸಿ ಒತ್ತುವರಿ ತೆರವು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಈ ಹಿಂದೆಯು ಜೆಸಿಬಿ ಬಳಸಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ತೆರಳಿದ್ದರು. ಆದರೆ, ಸ್ಥಳೀಯರು ವಿರೋಧಿಸಿ, ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕಾರ್ಯಾಚರಣೆ ಮುಂದೂಡಲಾಗಿತ್ತು. ಆದರೆ, ಗುರುವಾರ ಜೆಸಿಬಿ ಬಳಸಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ಕೆಲವು ಕಟ್ಟಡಗಳು ಒತ್ತುವರಿ ಜಾಗದಲ್ಲಿರುವ ಮಾಹಿತಿ ಇದೆ. ಸರ್ವೇ ನಡೆಸಲು ಸೂಚಿಸಲಾಗಿದೆ ಎಂದು ಡೀಸಿ ತಿಳಿಸಿದರು.
ರಾಮರೆಡ್ಡಿ ನಾಲ್ಕುವರೆ ಎಕರೆ ಜಾಗದಲ್ಲಿ ಲೇಔಟ್ ನಿರ್ಮಿಸಿದ್ದು, ಅದರಲ್ಲಿ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಲೇಔಟ್ ರಚಿಸಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು. ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದ ₹4.30 ಕೋಟಿ ಮೌಲ್ಯದ ಒಟ್ಟು 3 ಎಕರೆ ಸರ್ಕಾರಿ ಜಮೀನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))