ಶಶಿಕಾಂತ ಮೆಂಡೆಗಾರ
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಅಲ್ಪಸ್ವಲ್ಪ ಮಳೆಯ ಆಶಾಭಾವನೆಯಲ್ಲಿ ಕೆಲವು ರೈತರು ಬಿತ್ತನೆ ಮಾಡಿದರೂ ತೇವಾಂಶ ಕೊರತೆಯಿಂದ ಬಿತ್ತನೆ ಮಾಡಿದ ಫಸಲು ಕೈಗೆ ಬಾರದೆ ಕಂಗಾಲಾಗಿದ್ದಾರೆ. ಒಮ್ಮೆ ಅತಿವೃಷ್ಟಿಗೆ ಸಿಲುಕಿ ಬೆಳೆ ಹಾನಿಯಾದರೆ ಮತ್ತೊಮ್ಮೆ ಅನಾವೃಷ್ಟಿಗೆ ಸಿಲುಕಿ ಬೆಳೆಹಾನಿ ಅನುಭವಿಸುತ್ತಿದ್ದು, ಹಾಕಿದ ಬಂಡವಾಳ ಮರಳಿ ಬಾರದೇ ರೈತರು ಸಾಲದ ಶೂಲಕ್ಕೆ ಸಿಲುಕುತ್ತಿದ್ದಾರೆ. ಬರದ ಹಿನ್ನೆಲೆ ರೈತರ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಬೆಳೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.
ಶೇ.31ರಷ್ಟು ಮಳೆ ಕೊರತೆ, ಬಿತ್ತನೆ ಕುಂಠಿತ:ಜಿಲ್ಲೆಯಲ್ಲಿ ಹವಮಾನ ವೈಪರಿತ್ಯದಿಂದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವುದರಿಂದ ಜಿಲ್ಲೆಯಲ್ಲಿ ಶೇ.31ರಷ್ಟು ಮಳೆಯ ಕೊರತೆಯುಂಟಾಗಿದೆ. ಜುಲೈನಲ್ಲಿ 187.6 ಮಿಮೀ ಆಗಬೇಕಿದ್ದ ಮಳೆ ಕೇವಲ 167.8 ಮಿಮೀ ಆಗಿದೆ.
ತೊಗರಿ ಬೆಳೆ: ಸಾಧ್ಯವಾದರೆ ತೊಗರಿ ಬಿತ್ತನೆ ನಿಲ್ಲಿಸಬೇಕು. ಬಿತ್ತನೆಯಾದ ತೊಗರಿಯಲ್ಲಿ ತೇವಾಂಶ ನೋಡಿಕೊಂಡು ಗಿಡಗಳು ದಟ್ಟವಾಗಿದ್ದರೆ ಅವುಗಳನ್ನು ತೆಗೆಯಬೇಕು. ತೊಗರಿ ಬಿತ್ತನೆ ಮಾಡಿದರೆ ಇಳುವರಿ ಕಡಿಮೆಯಾಗುವುದು. ಬಿತ್ತುವವರು ಸುಣ್ಣದ ನೀರಿನಲ್ಲಿ 2 ತಾಸು ನೆನೆಹಾಕಿ ನಂತರ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಿದರೆ ಬೇಗನೆ ಮೊಳಕೆ ಬರುವುದು. ಒಂದು-ಒಂದೂವರೆ ಅಥವಾ ಎರಡು ತಿಂಗಳ ತೊಗರಿ ಇದ್ದರೆ ಬರ ನಿಯಂತ್ರಣಕ್ಕಾಗಿ ಪೋಟ್ಯಾಸಿಯಂ ನೈಟ್ರೆಟ್ 5 ಗ್ರಾಂ/ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು. ತೊಗರಿಯಲ್ಲಿ ಮೇಲಿಂದ ಮೇಲೆ ಎಡೆ ಹೊಡೆಯುವುದರಿಂದ ತೇವಾಂಶ ಸಂರಕ್ಷಣೆಯಾಗಿ ಕಳೆಯ ಬಾದೆಯು ಕಡಿಮೆಯಾಗುವುದು.
ಮೆಕ್ಕೆಜೋಳ: ಕೆಎನ್‌ಓ 3 -10ಗ್ರಾಂ/ಲೀ ಮತ್ತು ಎಂಓಪಿ 2ಗ್ರಾಂ/ಲೀ. ನೀರಿಗೆ ಬೆರೆಸಿ ಸಿಂಪರಣೆ ಕೈಗೊಳ್ಳಬೇಕು. ಯುರಿಯಾ ಸಿಂಪರಣೆ ತೇವಾಂಶ ಕಡಿಮೆ ಇದ್ದರೆ ಮಾಡಬಾರದು. ನೀರು ಇದ್ದರೆ ಸಾಲು ಬಿಟ್ಟ ಸಾಲು ನೀರು ಕೊಡಬೇಕು ಆದರೆ ಇಗ ಬಿತ್ತನೆ ಮಾಡಬಾರದು. ಕಬ್ಬಿನಲ್ಲಿ ಸಹ ಸಾಲು ಬಿಟ್ಟು ಸಾಲು ನೀರು ಅಥವಾ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ತೇವಾಂಶ ಕೊರತೆ ನಿರ್ವಹಿಸಲು ಶೇ.2.5 ಕೆಸಿಎಲ್ ಸಿಂಪರಣೆ ಮಾಡಬೇಕು. ಮಾಹಿತಿಗಾಗಿ ವಿಜಯಪುರದ ಕೃಷಿ ವಿಜ್ಞಾನ ಕೇಂದ್ರದ ಸಂಖ್ಯೆಗಳಿಗೆ: 9448973685, 9353181205, 8618667839 ಸಂಪರ್ಕಿಸಬಹುದಾಗಿದೆ.
-ಶಿವನಗೌಡ ಬಿರಾದಾರ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ