ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಿಮ ಪ್ರಸ್ತಾಪ ಸಲ್ಲಿಕೆಯಾಗಿದ್ದ ಮೂಡುಬಿದಿರೆ ‘ಮಹಾಯೋಜನೆ’ಯಿಂದ ಜನರಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಸಮರ್ಪಕವಾದ ಮಾಹಿತಿಯಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ, ಮಹಾಯೋಜನೆಯ ಕುರಿತು ಜನರಿಗೆ ಸರಿಯಾದ ಮಾಹಿತಿ ಬೇಕು, ಜನರಿಗೆ ಅನ್ಯಾಯವಾಗಬಾರದೆಂಬ ನಿಟ್ಟಿನಲ್ಲಿ ಮೂಡುಬಿದಿರೆ ಮೂಡಾ ನಿಯೋಗವು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ಭೇಟಿಯಾಗಿ ಸಮಸ್ಯೆಗಳನ್ನು ವಿವರಿಸಿದ್ದಾರೆ.ಮೂಡುಬಿದಿರೆಯಲ್ಲಿ ಮೂಡಾ (ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ) ರಚನೆಯಾಗುವಾಗ ಬಂಟ್ವಾಳ ಪಟ್ಟಣ ಪಂಚಾಯಿತಿಯ ಬೈಲಾವನ್ನೇ ಅನುಸರಿಸಲು ನಿರ್ಣಯವಾಗಿತ್ತು.ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗ ಇಲ್ಲಿನ ಮೂಡಾ ಪದಾಧಿಕಾರಿಗಳು ನಮಗೆ ಬಂಟ್ವಾಳದ ಬೈಲಾ ಬೇಡ, ಮಂಗಳೂರಿನ ಬೈಲಾ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರೆ ಸರ್ಕಾರವು ಮಂಗಳೂರು ಮಹಾನಗರ ಆಗಿದ್ದು, ಮೂಡುಬಿದಿರೆ ಪುರಸಭಾ ವ್ಯಾಪ್ತಿಯನ್ನೊಳಗೊಂಡಿರುವುದರಿಂದ ಅದು ಕಷ್ಟ ಸಾಧ್ಯ. ನೀವು ಬಂಟ್ವಾಳ ಬೈಲಾ ಪ್ರಕಾರವೇ ಮುಂದುವರಿಸಿಕೊಂಡು ಹೋಗಿ ಎನ್ನುವಂತೆ ಸೂಚಿಸಿತ್ತು.ಆದರೂ ಇದನ್ನೊಪ್ಪದ ಕೆಲವರು, ಪುರಸಭಾ ಸದಸ್ಯರನ್ನಾಗಲಿ, ಜನಪ್ರತಿನಿಧಿಗಳನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಜನರನ್ನು ಕತ್ತಲಲ್ಲಿರಿಸಿ ಕನ್ನಡ ಭವನದಲ್ಲಿ ಮೀಟಿಂಗ್ ನಡೆಸಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ವಿಪರ್ಯಾಸವೆಂದರೆ ಮೂಡಾ ಕಚೇರಿಯಲ್ಲಿ ಆ ಪ್ರಸ್ತಾಪದ ನಿರ್ಣಯದ ಪ್ರತಿಯೂ ಇಲ್ಲ.ಈ ಮಹಾಯೋಜನೆ ಕುರಿತು ಸಮರ್ಪಕ ಮಾಹಿತಿಯನ್ನು ನೀಡಬೇಕು, ಜನರಿಗೆ ಸಮಸ್ಯೆಯಾಗಬಾರದೆಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರ ನೇತೃತ್ವದಲ್ಲಿ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ಅವರ ನಿಯೋಗವು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರನ್ನು ಭೇಟಿಯಾಗಿ ಮನವಿ ನೀಡಿದೆ.ಸಚಿವರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಈ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸೂಚಿಸಿದ್ದಾರೆ.ನಿಯೋಗದಲ್ಲಿ ಮೂಡಾ ಸದಸ್ಯರಾದ ಸತೀಶ್ ಭಂಡಾರಿ, ಶೇಖರ್ ಬೊಳ್ಳಿ, ಪುರಸಭಾ ಸದಸ್ಯ ಪುರಂದರ ದೇವಾಡಿಗ, ಪೃಥ್ವಿರಾಜ್ ಮತ್ತಿತರರು ಇದ್ದರು.