ಮೂಡುಬಿದಿರೆ: ನೂತನ ಪ್ರಸಾದ್‌ ನೇತ್ರಾಲಯ ಉದ್ಘಾಟನೆ

KannadaprabhaNewsNetwork | Published : Mar 17, 2025 12:35 AM

ಸಾರಾಂಶ

ಬಡಗು ಬಸದಿ ಎದುರು ಕರಾವಳಿ ಕರ್ನಾಟಕದ ಕಣ್ಣಿನ ಆಸ್ಪತ್ರೆಗಳ ದೊಡ್ಡ ನೆಟ್‌ವರ್ಕ್ ಹೊಂದಿರುವ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ 10ನೇ ಸುಸಜ್ಜಿತ ಚಿಕಿತ್ಸಾ ಶಾಖೆಯ ಉದ್ಘಾಟನಾ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ದೇಹದ ವಿಶಿಷ್ಟ ಹಾಗೂ ಸೂಕ್ಷ್ಮ ಭಾಗವಾಗಿರುವ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಪ್ರಸಾದ್ ನೇತ್ರಾಲಯವು ಯಶಸ್ಸಿನ ಸೇವೆಯ ಮೂಲಕ ಅವಿಭಜಿತ ಜಿಲ್ಲೆಗೆ ಕೀರ್ತಿ ತಂದಿದೆ. ಶಿಬಿರಗಳ ಮೂಲಕ ಕಣ್ಣಿನ ತಜ್ಞ ವೈದ್ಯರನ್ನು ಗ್ರಾಮೀಣ ಭಾಗಗಳಿಗೆ ತಲುಪಿಸಿ ಕಣ್ಣಿನ ತಪಾಸಣೆ, ಜನರಲ್ಲಿ ಕಣ್ಣಿನ ಆರೋಗ್ಯದ ಕುರಿತು ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಭಾನುವಾರ ಇಲ್ಲಿನ ಬಡಗು ಬಸದಿ ಎದುರು ಕರಾವಳಿ ಕರ್ನಾಟಕದ ಕಣ್ಣಿನ ಆಸ್ಪತ್ರೆಗಳ ದೊಡ್ಡ ನೆಟ್‌ವರ್ಕ್ ಹೊಂದಿರುವ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ 10ನೇ ಸುಸಜ್ಜಿತ ಚಿಕಿತ್ಸಾ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಆಸ್ಪತ್ರೆ ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ಇಂದು ತಂತ್ರಜ್ಞಾನದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಿದೆ. ದೇಶದಲ್ಲಿ ಕಳೆದ ವರ್ಷ 83 ಲಕ್ಷದಷ್ಟು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದು, ಈ ವರ್ಷ 90 ಲಕ್ಷ ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಗುರಿ ದೇಶದ ನೇತ್ರ ವೈದ್ಯರು ಹೊಂದಿದ್ದಾರೆ ಎಂದರು.

ಶಾಸಕ ಉಮಾನಾಥ ಎ.ಕೋಟ್ಯಾನ್ ಅಧ್ಯಕ್ಷತೆವಹಿಸಿ, ಅನಾರೋಗ್ಯ ಪೀಡಿತರು ಸಮಸ್ಯೆಗಳನ್ನು ಹೇಳುವಾಗ, ಅದನ್ನು ಸರಿಯಾಗಿ ಕೇಳುವ ತಾಳ್ಮೆ ವೈದ್ಯರಲ್ಲಿ ಇರಬೇಕು. ವೈದ್ಯರ ಮಾರ್ಗದರ್ಶನ, ಮಾತುಗಳಿಂದ ರೋಗಿಗಳ ಶೇ.50 ಚಿಂತೆ ಕಡಿಮೆಯಾಗುತ್ತದೆ ಎಂದು ಹೇಳಿದರು.ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಸದಸ್ಯ ಪಿ.ಕೆ. ಥೋಮಸ್, ಉದ್ಯಮಿ ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಯಾಗಿದ್ದರು.ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 23 ವರ್ಷಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಅದರಲ್ಲೂ 1 ಲಕ್ಷದಷ್ಟು ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. 6 ಸಾವಿರ ಉಚಿತ ಶಿಬಿರವನ್ನು ಮಾಡಿದ್ದೇವೆ. ಈ ಶಿಬಿರಗಳು ಕೇವಲ ಉಭಯ ಜಿಲ್ಲೆಗಳು ಅಲ್ಲದೇ ರಾಜ್ಯದ ಇತರ ಜಿಲ್ಲೆಗಳು, ನೆರೆಯ ರಾಜ್ಯಗಳಲ್ಲೂ ಆಯೋಜಿಸಿದ್ದೇವೆ ಎಂದರು.

ಆಸ್ಪತ್ರೆಯ ನಿರ್ಮಾಣಕ್ಕೆ ಸಹಕರಿಸಿದ ಆದಿತ್ಯ ಹಾಗೂ ರಾಜೇಶ್ ಕೂಡ್ಲು ಅವರನ್ನು ಸನ್ಮಾನಿಸಲಾಯಿತು. ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ನಿರ್ದೇಶಕರಾದ ರಘುರಾಮ್ ರಾವ್, ರಶ್ಮಿ ಕೃಷ್ಣಪ್ರಸಾದ್, ಪ್ರಸಾದ್ ನೇತ್ರಾಲಯ ಮೂಡುಬಿದಿರೆ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ಸ್ಮೃತಿ, ಡಾ.ವಿಕ್ರಮ್ ಜೈನ್, ಡಾ.ಹರೀಶ್ ಉಪಸ್ಥಿತರಿದ್ದರು. ಪ್ರೊ. ಬಾಲಕೃಷ್ಣ ಮಡ್ಡೋಡಿ ನಿರೂಪಿಸಿದರು.

Share this article