ಬೆವರಿನ ಒರತೆ ನಿರಂತರ, ಬಸವಳಿದ ಜಿಲ್ಲೆಯ ಜನತೆ

KannadaprabhaNewsNetwork |  
Published : Mar 17, 2025, 12:35 AM IST
ಭಾನುವಾರದ ಸಂತೆಯಲ್ಲಿ ಮಧ್ಯಾಹ್ನ ಗ್ರಾಹಕರ ಸಂಖ್ಯೆ ಭಾರಿ ಕಡಿಮೆ ಇತ್ತು.  | Kannada Prabha

ಸಾರಾಂಶ

ಸುಮಾರು 15 ದಿನಗಳಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದು ಜನರು ಕುಳಿತಲ್ಲೇ ಬೆವರುತ್ತಿದ್ದಾರೆ.

ಕಾರವಾರ: ಉತ್ತರ ಕನ್ನಡದಲ್ಲಿ ಬಿರು ಬಿಸಿಲಿನಿಂದ ಜನತೆ ಬಸವಳಿಯುತ್ತಿದ್ದಾರೆ. ಸುಮಾರು 15 ದಿನಗಳಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದು ಜನರು ಕುಳಿತಲ್ಲೇ ಬೆವರುತ್ತಿದ್ದಾರೆ.

ಈ ಬಾರಿ ಮಾರ್ಚ್ ತಿಂಗಳಿನಲ್ಲಿಯೇ ಬಿಸಿಗಾಳಿ ಬೀಸುತ್ತಿರುವುದು, ಬಿಸಿಲಿನ ಬೇಗೆ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಯಾರೇ ಎದುರಾಗಲಿ ಸೆಕೆ, ಬಿಸಿಲು, ಬೆವರು, ಆಯಾಸದ ಕುರಿತಾಗಿಯೇ ಮಾತುಕತೆ ಆರಂಭವಾಗುತ್ತದೆ.

ಕಾರವಾರದ ಸಾವಂತವಾಡದಲ್ಲಿ ವಾರದಲ್ಲಿ ಎರಡು ದಿನ ರಾಜ್ಯದಲ್ಲೇ ಅತಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಮಾ. 11ರಂದು ಬೆಳಗ್ಗೆಯಿಂದ ನಂತರದ 24 ಗಂಟೆಗಳಲ್ಲಿ ಉಷ್ಣಾಂಶ 42.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಕರಾವಳಿ, ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲೆಡೆ ಸೆಕೆಯ ಹಾವಳಿ ಹೆಚ್ಚಿದ್ದರೂ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳಗಳಲ್ಲಿ ಜನತೆ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ಜನತೆ ತಂಪು ಪಾನೀಯಗಳಾದ ಎಳನೀರು, ಮಜ್ಜಿಗೆ, ಲೈಮ್ ಸೋಡಾ.... ಮೊರೆ ಹೋಗುತ್ತಿದ್ದಾರೆ. ಈಗಲೇ ಕಾರವಾರದಲ್ಲಿ ಎಳನೀರಿಗೆ ₹60 ಆಗಿದೆ. ಮೇ ತಿಂಗಳಿನಲ್ಲಿ ₹70 ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಸಿಲ ಬೇಗೆಯಿಂದ ಮಧ್ಯಾಹ್ನವಂತೂ ಹೊರಗಡೆ ಹೋಗಲಾಗುತ್ತಿಲ್ಲ. ಮುಸ್ಸಂಜೆಯಾಗುತ್ತಿದ್ದಂತೆ ಜನತೆ ತಂಗಾಳಿಗಾಗಿ ಬೀಚುಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಕರಾವಳಿಗೆ ಬಂದ ಪ್ರವಾಸಿಗರೂ ಈಗ ಬಿಸಿಲಿನ ಝಳ ತಡೆಯಲಾರದೇ ಪರಿತಪಿಸುತ್ತಿದ್ದಾರೆ. ನಗರದ ಭಾನುವಾರದ ಸಂತೆಯಲ್ಲೂ ಬಿಸಿಲೇರುತ್ತಿದ್ದಂತೆ ವ್ಯಾಪಾರ ವಹಿವಾಟು ಕೂಡ ಇಳಿಮುಖವಾಗಿದೆ. ಜನತೆ ಮುಂಜಾನೆ ಹಾಗೂ ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರಬಂದು ಕಾಯಿಪಲ್ಲೆಗಳನ್ನು ಖರೀದಿಸಿದರು.

ಈ ಹಿಂದೆಲ್ಲ ಉಷ್ಣಾಂಶ 40 ಡಿಗ್ರಿ ಆದಾಗಲೆಲ್ಲ ಮಳೆ ಬಂದು ತಂಪೆರಚುತ್ತಿತ್ತು. ಆದರೆ ಈ ಬಾರಿ ಮಳೆ ಬರುವ ಲಕ್ಷಣವೂ ಕಾಣಿಸುತ್ತಿಲ್ಲ. ಇದೆ ರೀತಿ ಮುಂದುವರಿದರೆ ಕುಡಿಯುವ ನೀರಿನ ಬರವೂ ತೀವ್ರವಾಗಿ ಕಾಡುವ ಸಾಧ್ಯತೆ ಇದೆ. ಈಗಾಗಲೇ ಬಾವಿಗಳಲ್ಲಿ ನೀರಿನ ಮಟ್ಟ ಇಳಿದಿದೆ. ಬಿರು ಬಿಸಿಲು, ಬೆವರಿನಿಂದಾಗಿ ಚರ್ಮರೋಗವೂ ಕಾಣಿಸಿಕೊಳ್ಳುವ ಆತಂಕ ಉಂಟಾಗಿದೆ.

ಬಿಸಿಲು, ಸೆಕೆಯಿಂದ ಹೀಟ್ ರ್‍ಯಾಶ್ ಬರುವ ಸಾಧ್ಯತೆ ಇದೆ. ಬೆವರು ಜಾಸ್ತಿಯಾಗಿ ಫಂಗಲ್ ಇನ್‌ಫೆಕ್ಷನ್, ರಿಂಗ್‌ ವರ್ಮ್, ನಿರ್ಜಲೀಕರಣದಿಂದ ತಲೆಸುತ್ತು ಬರುವುದು, ವಾಂತಿ ಸಹ ಆಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕಾಳಜಿ ವಹಿಸಬೇಕು ಎನ್ನುತ್ತಾರೆ ರಾಷ್ಟ್ರೀಯ ಹವಾಮಾನ ವೈಪರಿತ್ಯ ಹಾಗೂ ಮಾನವ ಆರೋಗ್ಯ ಕಾರ್ಯಕ್ರಮದ ನೋಡಲ್‌ ಅಧಿಕಾರಿ ಡಾ.ಕ್ಯಾ.ರಮೇಶ ರಾವ್.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ