ಕನ್ನಡಪ್ರಭ ವಾರ್ತೆ ತಿಪಟೂರು
ಮಹಿಳೆಯರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರ ಫಲವನ್ನು ಈಗಾಗಲೇ ಮಹಿಳೆಯರು ಪಡೆದುಕೊಳ್ಳುತ್ತಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರಸಭೆ ವತಿಯಿಂದ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಮಹಿಳೆ ಮತ್ತು ಪುರುಷ ಇಬ್ಬರು ಸರಿಸಮಾನರು ಎಂದು ತಿಳಿಸಿದ್ದರು. ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿರುವ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲೂ ಶೇ.೫೦ರಷ್ಟು ಮೀಸಲಾತಿ ನೀಡಲಾಗಿದ್ದು, ಸರ್ಕಾರವೂ ಸಹ ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದೆ ಎಂದರು. ಜೊತೆಗೆ ವಿಕಲಾಂಗಚೇತನರು, ಬಡವರು, ನಿರ್ಗತಿಕರು, ಬಡ ವಿದ್ಯಾರ್ಥಿಗಳ ನೆರವಿಗಾಗಿ ವಿವಿಧ ಯೋಜನೆಗಳಡಿಯಲ್ಲಿ ಪರಿಕರಗಳನ್ನು ನೀಡಲಾಗುತ್ತಿದ್ದು, ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ವಸತಿ ರಹಿತ ಕುಟುಂಬಗಳಿಗೆ ಸೂರು ಕಲ್ಪಿಸಲು ೧೧೦೦ ಮನೆಗಳನ್ನು ಮಂಜೂರಾತಿ ಮಾಡಿಸಿದ್ದು, ಈಗಾಗಲೆ ಟೆಂಡರ್ ಆಗಿದ್ದು ಮನೆಇಲ್ಲದ ನಿರ್ಗತಿಕ ಕುಟುಂಬಗಳಿಗೆ ಮನೆ ಕಟ್ಟಿಸಿಕೊಡಲಾಗುವುದು. ನಾನು ಶಿಕ್ಷಣ, ಆರೋಗ್ಯದ ಜೊತೆಗೆ ನೀರು ಮತ್ತು ವಿದ್ಯುತ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ನನ್ನ ಕ್ಷೇತ್ರದ ಅಭಿವೃದ್ಧಿ ನನ್ನ ಜವಾಬ್ದಾರಿಯಾಗಿದೆ ಎಂದರು.ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರಸಭೆ ಇತಿಹಾಸದಲ್ಲೇ ಪ್ರಥಮ ಬಾರಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭಾರತೀಯ ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿ ಗೌರವಿಸಲಾಗಿದ್ದು, ನಮ್ಮ ಸಂಸ್ಕೃತಿ ಪರಂಪರೆ ಉಳಿಯಲು ಮಹಿಳೆಯ ಪಾತ್ರ ಅನನ್ಯ. ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿರುವ ಮಹಿಳೆ ಮತ್ತಷ್ಟು ಶಕ್ತಿವಂತಳಾಗಬೇಕಿದೆ. ನಮ್ಮ ಸಮಾಜ ನಮಗೆ ನೀಡಿರುವಂತಹ ಜವಾಬ್ದಾರಿಯನ್ನು ನಾವು ಉತ್ತಮವಾಗಿ ನಿಭಾಯಿಸಬೇಕು ಎಂದ ಅವರು ನಗರಸಭೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಅಲೆಮಾರಿ ಜನಾಂಗದವರಿಗೆ ನಿವೇಶನ ಹಕ್ಕು ಪತ್ರ ವಿತರಣೆ, ಡೆ-ನಲ್ಮಾ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಇ-ಖಾತಾ ವಿತರಣೆ, ಬಡ ಜನಾಂಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿಕಲಚೇತನರಿಗೆ ತ್ರಿಚಕ್ರ ಮೋಟಾರ್ ಸೈಲ್, ಸಮಾಜ ಕಲ್ಯಾಣ ಇಲಾಖೆಗೆ ಹೀಟ್ ಪಂಪ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಕಂಪ್ಯೂಟರ್, ವಾಟರ್ ಪ್ಯೂರಿಪೈಯರ್, ಸೋಲಾರ್, ಬರ್ನಿಂಗ್ ಮಿಷನ್, ಸಾರ್ವಜನಿಕ ಆಸ್ಪತ್ರೆಗೆ ಸಾಧನ ಸಲಕರಣೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಹೀಗೆ ವಿವಿಧ ಅರ್ಹ ಫಲಾನುಭವಿಗಳಿಗೆ ಪರಿಕರಗಳನ್ನು ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪವನ್‌ಕುಮಾರ್, ನಗರಸಭೆ ಉಪಾಧ್ಯಕ್ಷೆ ಮೇಘಶ್ರೀ, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಜಲಜಾಕ್ಷಮ್ಮ, ಸಮಾಜ ಕಲ್ಯಾಣ ಇಲಾಖೆಯ ತ್ರಿವೇಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಧಿಕಾ ಸೇರಿದಂತೆ ನಗರಸಭೆಯ ಎಲ್ಲಾ ಸದಸ್ಯರು, ನಾಮಿನಿ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.