ಮೂಡುಬಿದಿರೆ: 47 ಸರ್ಕಾರಿ ಶಾಲೆಗಳಿಗೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ತಾಂತ್ರಿಕ ನೆರವು!

KannadaprabhaNewsNetwork |  
Published : Aug 26, 2025, 02:00 AM IST
ಮೂಡುಬಿದಿರೆ ಎಸ್.ಎನ್. ಎಂ. ಪಾಲಿಟೆಕ್ನಿಕ್ ನ ಎನ್ನೆಸ್ಸೆಸ್ ಘಟಕದಿಂದ ಶಾಲೆಗಳ ಸೇವೆ. | Kannada Prabha

ಸಾರಾಂಶ

ಮೂಡುಬಿದಿರೆ ಎಸ್‌ಎನ್‌ಎಂ ಪಾಲಿಟೆಕ್ನಿಕ್‌ನ ಎನ್ನೆಸ್ಸೆಸ್ ಘಟಕ ಇದೀಗ ರಜತ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಅವರು ಹಾಕಿಕೊಂಡ ವಿಶಿಷ್ಟ ಯೋಜನೆಯೇ ಸರ್ಕಾರಿ ಶಾಲೆಗಳಿಗೆ ತಾಂತ್ರಿಕ ಸೇವೆ.

ಗಣೇಶ್ ಕಾಮತ್

ಮೂಡುಬಿದಿರೆ: ತಾವು ಮಾಡುವ ಸೇವೆ ಅರ್ಥಪೂರ್ಣ ಮಾತ್ರವಲ್ಲ ಸಾರ್ಥಕವಾಗಬೇಕು. ಅಲ್ಲೊಂದು ಧನ್ಯತಾ ಭಾವ ಕಾಣಬೇಕು ಎಂದು ಕನಸು ಕಂಡ ವಿದ್ಯಾರ್ಥಿಗಳು, ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಯಶಸ್ಸಿನ ಹೆಜ್ಜೆಗಳನ್ನೂ ಇಟ್ಟಾಗಿದೆ. ಮೂಡುಬಿದಿರೆ ಎಸ್‌ಎನ್‌ಎಂ ಪಾಲಿಟೆಕ್ನಿಕ್‌ನ ಎನ್ನೆಸ್ಸೆಸ್ ಘಟಕ ಇದೀಗ ರಜತ ಸಂಭ್ರಮಕ್ಕೆ ಸಜ್ಜಾಗುತ್ತಿದೆ. ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಅವರು ಹಾಕಿಕೊಂಡ ವಿಶಿಷ್ಟ ಯೋಜನೆಯೇ ಸರ್ಕಾರಿ ಶಾಲೆಗಳ ಸೇವೆ.

ಹೌದು, ಇವರೆಲ್ಲರೂ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು. ಮೂಡುಬಿದಿರೆ ಗ್ರಾಮಾಂತರ ಸಹಿತ ಸುತ್ತಮುತ್ತಲಿನ 47 ಸರ್ಕಾರಿ ಶಾಲೆಗಳಿಗೆ ಒಂಬತ್ತು ತಂಡಗಳಾಗಿ ಹೊರಟ 35 ವಿದ್ಯಾರ್ಥಿಗಳು ಅಲ್ಲಿನ ಅಗತ್ಯತೆಗಳ ಪಟ್ಟಿ ಮಾಡಿದ್ದಾರೆ. ಶಿರ್ತಾಡಿ, ಬೆಳುವಾಯಿ, ಇರುವೈಲುಮ ಮಾರೂರು, ಗಾಂಧೀನಗರ, ಮೂಡುಬಿದಿರೆ ಗ್ರಾಮಾಂತರ ಹೀಗೆ ಸುತ್ತ ಮುತ್ತಲಿನ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ತಾಂತ್ರಿಕ ನೆರವು ಪಟ್ಟಿಮಾಡಿಕೊಂಡಿದ್ದಾರೆ. ಮೊದಲು ಆದ್ಯತೆಯಲ್ಲಿ 25 ಶಾಲೆಗಳಿಗೆ ಸಮಯಾವಕಾಶವಿದ್ದರೆ ಎಲ್ಲ ಕಡೆ ಸೇವೆ ವಿಸ್ತರಿಸುವ ಉದ್ದೇಶ ಈ ತಂಡದ್ದು.ವೈರಿಂಗ್, ಸ್ವಿಚ್ ಬೋರ್ಡ್, ಅರ್ಥಿಂಗ್‌, ಫ್ಯಾನ್, ಕಂಪ್ಯೂಟರ್ ರಿಪೇರಿ, ಕರಿ ಹಲಗೆ ಪೈಂಟಿಂಗ್ ಹೀಗೆ ಆದ್ಯತೆಯ ಕೆಲಸಗಳಲ್ಲಿ ನುರಿತ ವಿದ್ಯಾರ್ಥಿಗಳು ಅವುಗಳ ರಿಪೇರಿ, ನವೀಕರಣ ನಡೆಸಿದ್ದಾರೆ. ಶಾಲೆಯವರು ಒದಗಿಸಿದ ಸೊತ್ತುಗಳಿಗೆ ಶ್ರಮಿಕರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವೆಡೆ ದಾನಿಗಳು ಕೊಟ್ಟಿದ್ದನ್ನೂ ಫಿಟ್ಟಿಂಗ್ ಮಾಡಿದ್ದಾರೆ. ಅನಿವಾರ್ಯವಾದ ಕಡೆ ತಾವೇ ಒದಗಿಸಿದ್ದಾರೆ.

ಹಳೆ ವಿದ್ಯಾರ್ಥಿಗಳಾದ ಪ್ರಮೋದ್, ಸಮ್ಯಕ್ ತಮ್ಮ ಉದ್ಯೋಗದ ನಡುವೆಯೂ ಸಂಸ್ಥೆಯ ಸೇವಾ ಕಾರ್ಯಕ್ಕೆ ನೆರವಾಗುತ್ತಿದ್ದಾರೆ.

ಈಗಾಗಲೇ ಆರು ಶಾಲೆಗಳಲ್ಲಿ ಕೆಲಸ ಪೂರ್ಣವಾಗಿದೆ. ಆ.2ರಿಂದ ಆರಂಭವಾಗಿರುವ ಈ ಅಭಿಯಾನ ಸೆ.24ರ ಎನ್ಸೆಸ್ಸೆಸ್ ಡೇ ಮೊದಲು ಮುಗಿಸಿ ರಜತ ಸಂಭ್ರಮ ಆಚರಿಸುವ ಇರಾದೆ ತಂಡದ್ದು ಎಂದು ಘಟಕ ಅಧಿಕಾರಿ ರಾಮ್ ಪ್ರಸಾದ್ ಎಂ. ಮತ್ತು ಗೋಪಾಲಕೃಷ್ಣ, ಕನ್ನಡಪ್ರಭದ ಜತೆ ಸಂತಸ ಹಂಚಿಕೊಂಡಿದ್ದಾರೆ.

ಈ ಅಭಿಯಾನದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ನೊರೋನಾ ತರೀನಾ ಪಿಂಟೋ ಸಹಿತ ಆಡಳಿತ ಮಂಡಳಿಯ ಮಾರ್ಗದರ್ಶನ, ಸಹಕಾರವೂ ಕಾರಣ ಎನ್ನುವ ಅನಿಸಿಕೆ ಅವರದ್ದು.ಉತ್ತಮ ಘಟಕ ಗೌರವ:

ಈಗಾಗಲೇ ಐವರು ಸ್ವಯಂ ಸೇವಕರು ಈ ಘಟಕದಿಂದ ಉತ್ತಮ ಸ್ವಯಂ ಸೇವಕರಾಗಿ ವಿವಿ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, 2016-17ನೇ ಸಾಲಿನಲ್ಲಿ ಉತ್ತಮ ಘಟಕ, ಯೋಜನಾಧಿಕಾರಿ ಗೌರವವೂ ಈ ಘಟಕಕ್ಕೆ ಲಭಿಸಿತ್ತು. ಈ ಪಾಲಿಟೆಕ್ನಿಕ್ ಗುಣಮಟ್ಟದ ಶಿಕ್ಷಣಕ್ಕೆ ರಾಜ್ಯದಲ್ಲೇ ಮೊದಲ ಸಾಲಿನಲ್ಲಿದೆ ಎನ್ನುವುದು ಗಮನಾರ್ಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ : ಸಿಎಂ ಸಿದ್ದರಾಮಯ್ಯ
ಸಿಎಂ ರೇಸಲ್ಲಿ ಡಿಕೆ ಒಬ್ಬರೇ ಇಲ್ಲ : ರಾಜಣ್ಣ