ಮೂಡುಬಿದಿರೆ : ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಸೋಮವಾರ ಮಿಜಾರಿನ ಶ್ರೀಮತಿ ಶೋಭಾ ಮೋಹನ್ ಆಳ್ವ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದದೊಂದಿಗೆ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ನ ಉದ್ಘಾಟನಾ ಸಮಾರಂಭವು ಸೋಮವಾರ ಸಂಜೆ 6 ಗಂಟೆಗೆ ಮಿಜಾರಿನ ಶ್ರೀಮತಿ ಶೋಭಾ ಮೋಹನ್ ಆಳ್ವ ಆವರಣದಲ್ಲಿ ನಡೆಯಲಿದೆ.
ಸಂಜೆ 5ರಿಂದ 6ರವರೆಗೆ ಉಪಹಾರ, 6ರಿಂದ 7ರವರೆಗೆ ಉದ್ಘಾಟನಾ ಕಾರ್ಯಕ್ರಮ ಹಾಗೂ 7ರಿಂದ 8.15ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕಾಲೇಜಿನ ವಿವಿಧ ವಿಭಾಗಗಳು, ವಿಶಾಲ ತರಗತಿ ಕೊಠಡಿಗಳು, ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸಭಾಂಗಣ ಹಾಗೂ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಅನುಕೂಲವಾಗುವಂತೆ 24 ಗಂಟೆಯೂ ಕಾರ್ಯನಿರ್ವಹಿಸುವ ವಿಶಾಲ ಗ್ರಂಥಾಲಯ ನಿರ್ಮಿಸಲಾಗಿದೆ.ಎಲ್ಲ ವಿಭಾಗಗಳಲ್ಲೂ ಅನುಭವಿ ಪ್ರಾಧ್ಯಾಪಕರನ್ನು ನೇಮಕ ಮಾಡಲಾಗಿದ್ದು, ಆಧುನಿಕ ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮಿಜಾರಿನಲ್ಲಿ 650 ಹಾಸಿಗೆಯ ಪ್ರತ್ಯೇಕ ಆಸ್ಪತ್ರೆಯನ್ನು ನಿರ್ಮಿಸುವ ಯೋಜನೆ ಇದೆ.
ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆಗೆ ಸಮರ್ಪಿತ ಕಾರ್ಡಿಯಾಕ್ ಸೆಂಟರ್, ಕ್ಯಾಥ್ ಲ್ಯಾಬ್ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ 24*7 ಸೇವೆ ಲಭ್ಯವಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯ ಸೌಲಭ್ಯವೂ ಲಭ್ಯವಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳನ್ನು ಇನ್ನಷ್ಟು ವಿಸ್ತರಿಸುವ ಯೋಜನೆಗಳಿವೆ.
ಕೈಗೆಟುಕುವ ಹೆರಿಗೆ ಸೇವೆ: ಆಳ್ವಾಸ್ ಹೆಲ್ತ್ ಸೆಂಟರ್‌ನ ‘ಮಡಿಲು’ ಯೋಜನೆಯಡಿ ಕಡಿಮೆ ವೆಚ್ಚದಲ್ಲಿ ಹೆರಿಗೆ, ಗರ್ಭಕೋಶಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಸಮಾಜದ ವಿವಿಧ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ತಲುಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.ಆರೋಗ್ಯ ಸೇವೆ: ರಾಜ್ಯ ಸರ್ಕಾರದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಡಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ, ಬೆಳುವಾಯಿ, ಶಕ್ತಿನಗರ ಆರೋಗ್ಯ ಕೇಂದ್ರಗಳ ನಿರ್ವಹಣೆಯನ್ನು ಆಳ್ವಾಸ್ ಹೆಲ್ತ್ ಸೆಂಟರ್ ವಹಿಸಿಕೊಂಡಿದೆ. ಮಾನಸಿಕ ಆರೋಗ್ಯಕ್ಕೂ ವಿಶೇಷ ಆದ್ಯತೆ: ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಆಳ್ವಾಸ್ ಪುನರ್ಜನ್ಮ ಕೇಂದ್ರವನ್ನು ಮೇಲ್ದರ್ಜೆಗೇರಿಸಿ 50 ಹಾಸಿಗೆಗಳ ಆಳ್ವಾಸ್ ಪುನರ್ಜನ್ಮ ಮಾನಸಿಕ ಆರೋಗ್ಯ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಯು ಮುಂದಿನ ದಿನಗಳಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸುವ ಯೋಜನೆ ಇದೆ.
ಸೇವಾ ಮನೋಭಾವದ ವೈದ್ಯರ ನಿರ್ಮಾಣ: ವೈದ್ಯಕೀಯ ಶಿಕ್ಷಣವನ್ನು ಕೇವಲ ತಾಂತ್ರಿಕ ಜ್ಞಾನಕ್ಕೆ ಸೀಮಿತಗೊಳಿಸದೆ, ರೋಗಿಗಳು ಮತ್ತು ಸಮಾಜದ ಬಗ್ಗೆ ಮಾನವೀಯತೆ, ಕರುಣೆ ಹಾಗೂ ಸೇವಾ ಮನೋಭಾವ ಹೊಂದಿರುವ ವೈದ್ಯರನ್ನು ರೂಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.