ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜಕಾರಣಿಯೊಬ್ಬರು ಡೋಂಗಿ ಪರಿಸರವಾದಿಗಳಿಂದಲೇ ವರದಿ ಜಾರಿಗೆ ಸಹಕಾರ ಸಿಗುತ್ತಿದೆ ಎಂದು ಹೇಳಿರುವುದು ಖಂಡನೀಯ ಎಂದು ಪರಿಸರ ಹಾಗೂ ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಡೋಂಗಿ ಪರಿಸರವಾದಿ ಯಾರು ಎಂಬುದನ್ನು ಜಿಲ್ಲೆಯ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಮಡಿಕೇರಿ : ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜಕಾರಣಿಯೊಬ್ಬರು ಡೋಂಗಿ ಪರಿಸರವಾದಿಗಳಿಂದಲೇ ವರದಿ ಜಾರಿಗೆ ಸಹಕಾರ ಸಿಗುತ್ತಿದೆ ಎಂದು ಹೇಳಿರುವುದು ಖಂಡನೀಯ ಎಂದು ಪರಿಸರ ಹಾಗೂ ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಡೋಂಗಿ ಪರಿಸರವಾದಿ ಯಾರು ಎಂಬುದನ್ನು ಜಿಲ್ಲೆಯ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ 7ನೇ ಕರಡು ಪ್ರತಿಗೆ ಆಕ್ಷೇಪಣೆ ಸಲ್ಲಿಸುವ ಸಂಬಂಧ ಇತ್ತೀಚೆಗೆ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಪ್ರಮುಖರ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ರಾಜಕಾರಣಿಯೊಬ್ಬರು ಡೋಂಗಿ ಪರಿಸರವಾದಿಗಳಿಂದಲೇ ವರದಿ ಜಾರಿಗೆ ಕಾರಣವಾಗುತ್ತಿದೆ, ಡೋಂಗಿ ಪರಿಸರವಾದಿಗಳಿಗೆ ವಿದೇಶದಿಂದ ಹಣ ಬರುತ್ತದೆ, ಆ ಕಾರಣದಿಂದ ಅವರು ಇದರಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಹಲವು ಪರಿಸರವಾದಿಗಳು ಪ್ರಾಮಾಣಿಕವಾಗಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಆದ್ದರಿಂದ ವಿದೇಶದಿಂದ ಹಣ ಪಡೆಯುತ್ತಿರುವ ಆ ಪರಿಸರವಾದಿ ಯಾರು ಎಂದು ಹೆಸರನ್ನು ಬಹಿರಂಗಪಡಿಸಿ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.ಪ್ರತಿಷ್ಠಾನದ ಸದಸ್ಯ ಗೋಪಿನಾಥ್ ತಿಮ್ಮಯ್ಯ ಮಾತನಾಡಿ, ಪರಿಸರವಾದಿಗಳು ಪ್ರಕೃತಿ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಪ್ರಕೃತಿ ಉಳಿದರೆ ಮಾತ್ರ ಮನುಷ್ಯನ ಉಳಿವು ಸಾಧ್ಯ. ಆದರೆ ಜಿಲ್ಲೆಯ ಪರಿಸರವಾದಿಗಳಿಗೆ ಅನ್ವಯಿಸುವಂತೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಸದಸ್ಯ ಸನ್ನಿ ಸೋಮಯ್ಯ ಮಾತನಾಡಿ, ಕೊಡಗಿನ ಪರಿಸರ ರಕ್ಷಣೆಗಾಗಿ ಹಲವು ಪರಿಸರವಾದಿಗಳು ನಿರಂತರ ಹೋರಾಟ ಮಾಡುತ್ತಿದ್ದಾರೆ. ಆದರೆ ರಾಜಕಾರಣಿಗಳ ಸ್ವಾರ್ಥಕ್ಕೆ ಅಡ್ಡಿಯಾದಾಗ ಮಾತ್ರ ಡೋಂಗಿ ಪರಿಸರವಾದಿಗಳು ಎಂದು ಹಣೆಪಟ್ಟಿ ಕಟ್ಟುವ ಕೆಲಸವಾಗುತ್ತಿದೆ ಎಂದು ಟೀಕಿಸಿದರು. ಪ್ರತಿಷ್ಠಾನದ ಸದಸ್ಯ ಫ್ರ್ಯಾಂಕ್ಲಿನ್ ಉಪಸ್ಥಿತರಿದ್ದರು.