ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2025-26ನೇ ಸಾಲಿನಲ್ಲಿ 22.39 ಕೋಟಿ ರು. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ತಿಳಿಸಿದರು.
ಮಡಿಕೇರಿ : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2025-26ನೇ ಸಾಲಿನಲ್ಲಿ 22.39 ಕೋಟಿ ರು. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ 2026ರ ಮಾರ್ಚ್ 31ರ ಅಂತ್ಯಕ್ಕೆ 31.51 ಕೋಟಿ ರು. ಒಟ್ಟು ಲಾಭ ಗಳಿಸಿದ್ದು, 9.12 ಕೋಟಿ ರು. ತೆರಿಗೆ ಮತ್ತು ಶಾಸನಬದ್ಧ ಮೀಸಲಿಗೆ ಕಾಯ್ದಿರಿಸಿ 22.39 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಇದು ಕಳೆದ ಸಾಲಿಗಿಂತ ಹೆಚ್ಚಾಗಿದೆ ಎಂದರು.1921ರಲ್ಲಿ ಕೇವಲ 4 ಸಾವಿರ ರು. ಷೇರು ಬಂಡವಾಳ, 10 ಸಾವಿರ ರು. ಠೇವಣಿಯೊಂದಿಗೆ ಆರಂಭವಾದ ಬ್ಯಾಂಕ್ ಇದೀಗ 2043 ಕೋಟಿ ರು. ಠೇವಣಿ, 1772 ಕೋಟಿ ರು. ಸಾಲದ ಹೊರಬಾಕಿ ಹೊಂದಿದೆ. ಒಟ್ಟು ವಹಿವಾಟು 3815.25 ಕೋಟಿ ರು. ಆಗಿದೆ. ಜಿಲ್ಲೆಯ 24 ಬ್ಯಾಂಕ್‌ಗಳ ಪೈಕಿ ಶೇ. 21.36 ಮಾರುಕಟ್ಟೆ ಪಾಲಿನೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳಲ್ಲಿ 3ನೇ ಸ್ಥಾನದಲ್ಲಿದೆ. ಆಡಿಟ್‌ನಲ್ಲಿ 97 ಅಂಕಗಳೊಂದಿಗೆ ''''''''ಎ'''''''' ವರ್ಗ ಪಡೆದಿದೆ ಎಂದು ತಿಳಿಸಿದರು.ರೈತರಿಗೆ 812.68 ಕೋಟಿ ರು. ಕೆಸಿಸಿ ಸಾಲ ವಿತರಿಸಲಾಗಿದೆ. ರಾಜ್ಯ ಸರ್ಕಾರ 3 ರಿಂದ 5 ಲಕ್ಷದವರೆಗೆ ಶೂನ್ಯ ಬಡ್ಡಿ ಆದೇಶ ನೀಡಿದ್ದರೂ, ರಾಜ್ಯದಲ್ಲೇ ಕೊಡಗು ಬ್ಯಾಂಕ್ ಮಾತ್ರ 9,719 ರೈತರಿಗೆ 443.92 ಕೋಟಿ ರು. ಸಾಲವನ್ನು ಸ್ವಂತ ಬಂಡವಾಳದಿಂದ ನೀಡಿದೆ. ಬ್ಯಾಂಕ್‌ನ ಒಟ್ಟು ವಸೂಲಾತಿ ಶೇ. 98.12, ಕೃಷಿ ಸಾಲ ವಸೂಲಾತಿ ಶೇ. 99.92 ಆಗಿದ್ದು, ನಿವ್ವಳ ಎನ್‌ಪಿಎ ಶೂನ್ಯವಾಗಿದೆ. ಬಂಡವಾಳ ಸಾಮರ್ಥ್ಯ ಶೇ. 11.42 ರಷ್ಟಿದೆ. ಈ ಸಾಧನೆಯ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಿಗೆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ. 20 ರಷ್ಟು ಡಿವಿಡೆಂಡ್ ಘೋಷಿಸಲಾಗುವುದು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉನ್ನತ್ತಿ ಭವನದ ದಿ. ಪಂದ್ಯಂಡ ಐ. ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಸೆ. 22 ರಂದು 101ನೇ ಮಹಾಸಭೆ ನಡೆಯಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಹೊಟ್ಟೆಂಗಡ ಎಂ. ರಮೇಶ್, ಹೊಸೂರು ಜೆ. ಸತೀಶ್ ಕುಮಾರ್, ಎಚ್.ಕೆ. ಮಾದಪ್ಪ, ಸಿಇಒ ಎಂ.ಕೆ. ಬೆಳ್ಯಪ್ಪ ಇದ್ದರು.
