ಮೂಡುಬಿದಿರೆ ದಸರಾ : ಗುಣಪಾಲ ಕಡಂಬರಿಗೆ ಸಮಾಜ ಮಂದಿರ ಪುರಸ್ಕಾರ

KannadaprabhaNewsNetwork |  
Published : Oct 12, 2026, 02:45 AM IST
ಕಡಂಬ ಸನ್ಮಾನ | Kannada Prabha

ಸಾರಾಂಶ

ದಸರಾದಂತಹ ಹಬ್ಬಗಳು ಪರಂಪರೆಯ ಶಕ್ತಿಯಾಗಿ ರಾಷ್ಟ್ರವ್ಯಾಪಿಯಾಗಿ ವಿಸ್ತರಿಸಿ ಬೆಳೆದಿವೆ. ಬದಲಾಗುತ್ತಿರುವ ಸಮಾಜದಲ್ಲಿ ಯುವಶಕ್ತಿಯನ್ನು ಮುಖ್ಯವಾಹಿನಿಗೆ ತರುವ ಸವಾಲು ನಮ್ಮ ಮುಂದಿದೆ. ಸಂಘರ್ಷವಿಲ್ಲದ ಸಾಮರಸ್ಯದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕಾಗಿದೆ. ಇತಿಹಾಸದ ಬೆಳಕಲ್ಲಿ ಭಾಷೆ, ಸಂಸ್ಕೃತಿಯನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು. ಅವರು ರವಿವಾರ ಸಂಜೆ ಸಮಾಜ ಮಂದಿರದ ಎಚ್. ಉದಯ ಶಂಕರ ಪ್ರಭು ಸಭಾಂಗಣದಲ್ಲಿ ಸಮಾಜ ಮಂದಿರ ಸಭಾ ವತಿಯಿಂದ ಐದು ದಿನಗಳ ೭9 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರೆ : ದಸರಾದಂತಹ ಹಬ್ಬಗಳು ಪರಂಪರೆಯ ಶಕ್ತಿಯಾಗಿ ರಾಷ್ಟ್ರವ್ಯಾಪಿಯಾಗಿ ವಿಸ್ತರಿಸಿ ಬೆಳೆದಿವೆ. ಬದಲಾಗುತ್ತಿರುವ ಸಮಾಜದಲ್ಲಿ ಯುವಶಕ್ತಿಯನ್ನು ಮುಖ್ಯವಾಹಿನಿಗೆ ತರುವ ಸವಾಲು ನಮ್ಮ ಮುಂದಿದೆ. ಸಂಘರ್ಷವಿಲ್ಲದ ಸಾಮರಸ್ಯದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕಾಗಿದೆ. ಇತಿಹಾಸದ ಬೆಳಕಲ್ಲಿ ಭಾಷೆ, ಸಂಸ್ಕೃತಿಯನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ನುಡಿದರು. ಅವರು ರವಿವಾರ ಸಂಜೆ ಸಮಾಜ ಮಂದಿರದ ಎಚ್. ಉದಯ ಶಂಕರ ಪ್ರಭು ಸಭಾಂಗಣದಲ್ಲಿ ಸಮಾಜ ಮಂದಿರ ಸಭಾ ವತಿಯಿಂದ ಐದು ದಿನಗಳ ೭9 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿಯ ಸಾಂಸ್ಕೃತಿಕ ಬೇರಾಗಿ ಬೆಳೆದಿರುವ ತುಳು ಭಾಷೆ ಸಾಮರಸ್ಯಕ್ಕೂ ಕೊಂಡಿಯಾಗಿದೆ. ಇದನ್ನು ಬೆಳೆಸುವಲ್ಲಿ ಜಿಲ್ಲೆಯ ರಾಜಕಾರಣಿಗಳೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ಅನ್ಯ ಭಾಷಿಗರ ಕೊಡುಗೆ ಅಭಿನಂದನೀಯ ಎಂದವರು ಹೇಳಿದರು.

ಸಮಾಜ ಮಂದಿರ ಪುರಸ್ಕಾರ: ಶಿಕ್ಷಣ , ಕ್ರೀಡೆ, ಕೃಷಿ, ಧಾರ್ಮಿಕ ಸಾಂಸ್ಕೃತಿಕ ರಂಗದ ಮೇರು ಸಾಧಕ ಕೆ. ಗುಣಪಾಲ ಕಡಂಬ ಅವರಿಗೆ 2026ನೇ ಸಾಲಿನ ಸಮಾಜ ಮಂದಿರ ಪುರಸ್ಕಾರ ಪ್ರದಾನ ಮಾಡಲಾಯಿತು. ರತಜ ಸ್ಮರಣಿಕೆ, ಸಮ್ಮಾನ ಪತ್ರ ಸಹಿತ ಗೌರವಾದರಗಳೊಂದಿಗೆ ಕಡಂಬ ಅವರನ್ನು ಗೌರವಿಸಲಾಯಿತು.

ತುಳು ಅಕಾಡೆಮಿ ಸದಸ್ಯರಾಗಿ ತುಳು ಕ್ಯಾಲೆಂಡರ್ ಮೂಲಕ ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸಿದ ದಿನಗಳನ್ನು ನೆನಪಿಸಿಕೊಂಡ ಗುಣಪಾಲ ಕಡಂಬರು ಕಂಬಳ ರಂಗದಲ್ಲಿ ಬೆಳವಣಿಗೆಗೆ ಕಾರಣರಾದವರನ್ನು ಸ್ಮರಿಸಿಕೊಂಡರು. ಕರ್ಮಭೂಮಿಯಲ್ಲಿ ದೊರೆತ ಗೌರವ ಶ್ರೇಷ್ಠ ಎಂದ ಅವರು ತಾಯಿ ಬೇರಾಗಿ ಮೂಡುಬಿದಿರೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಡಾ. ಮೋಹನ ಆಳ್ವರ ಕೊಡುಗೆ ಮಹತ್ವಪೂರ್ಣ ಎಂದರು. ಇದೇ ಸಂದರ್ಭದಲ್ಲಿ ಎಪ್ಪತ್ತೈದರ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಡಾ. ಎಂ. ಮೋಹನ ಆಳ್ವ ಅವರನ್ನೂ ಸಮಾಜ ಮಂದಿರ ಸಭಾದ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಕರಾವಳಿಯಲ್ಲಿ ತುಳು ಸಂಸ್ಕೃತಿ ಭಾಷೆಯ ಬೆಳವಣಿಗೆಯಲ್ಲಿ ವೀರಪ್ಪ ಮೊಯಿಲಿಯವರು ತುಳು ಅಕಾಡೆಮಿ ಆರಂಭಿಸಿ ನೀಡಿದ ಪ್ರೇರಣೆ ಇದೀಗ ತುಳುವಿಗೆ ಎರಡನೇ ರಾಜ್ಯಭಾಷೆಯ ಗೌರವಕ್ಕೆ ತಲುಪಿಸಿದೆ. ಅವಳಿ ಜಿಲ್ಲೆಯ ಸಂಸದರು ತುಳುವಿಗೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರುವಲ್ಲಿ ಅಗತ್ಯ ಒತ್ತು ನೀಡಬೇಕಾಗಿದೆ ಎಂದರು.

ದಸರಾ ಉತ್ಸವ ಸಂಚಾಲಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಮಾಜ ಮಂದಿರ ಸಭಾದ ಕಾರ್ಯದರ್ಶಿ ಎಚ್. ಸುರೇಶ್ ಪ್ರಭು ಸಮ್ಮಾನ ಪತ್ರ ವಾಚಿಸಿದರು.ಜತೆ ಕಾರ್ಯದರ್ಶಿ ,ದಸರಾ ಉತ್ಸವ ಸಂಚಾಲಕ ಎಂ. ಗಣೇಶ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಎಸ್. ಡಿ.ಸಂಪತ್ ಸಾಮ್ರಾಜ್ಯ, ಜತೆ ಕಾರ್ಯದರ್ಶಿ ಕೆ. ಆರ್. ಪಂಡಿತ್, ಸದಸ್ಯರಾದ ಪ್ರತಾಪ್ ಕುಮಾರ್ ಜೈನ್, ಸಿ.ಹೆಚ್. ಅಬ್ದುಲ್ ಗಫೂರ್, ಪಿ. ರಾಮಪ್ರಸಾದ್ ಭಟ್, ಪಿ.ಜಯರಾಜ ಕಂಬಳಿ, ಕೆ.ವೆಂಕಟೇಶ ಕಾಮತ್, ರಾಜೇಶ್ ಕೋಟೆಗಾರ್ , ಎಂ.ಎಸ್. ಕೋಟ್ಯಾನ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸಂತೋಷ್ ಕುಮಾರ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು. ಚಿತ್ರ: ಮೂಡುಬಿದಿರೆಯ ಸಮಾಜ ಮಂದಿರ ಸಭಾ ವತಿಯಿಂದ ೭೫ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಸಂಭ್ರಮವದಲ್ಲಿ ಕೆ. ಗುಣಪಾಲ ಕಡಂಬ ಅವರಿಗೆ ಸಮಾಜ ಮಂದಿರ ಪುರಸ್ಕಾರ -2026 ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಿಲಾಗ್ರಿಸ್ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ
ಸಿಎಂ ಮಂಗಳೂರು, ಉಡುಪಿ ಪ್ರವಾಸ ರದ್ದು