ಮೂಡುಬಿದಿರೆಯ ಮೊಸರು ಕುಡಿಕೆ: ಅನನ್ಯ ಸಂಭ್ರಮ

KannadaprabhaNewsNetwork |  
Published : Sep 07, 2026, 03:00 AM IST
ಅನನ್ಯ ಸಾಂಸ್ಕೃತಿಕತೆಗೆ ಸಾಕ್ಷಿಯಾದ ಮೂಡುಬಿದಿರೆಯ ಮೊಸರು ಕುಡಿಕೆ ಉತ್ಸವಅವಳಿ ಕೃಷ್ಣರ ಮೋಡಿ... ಕತ್ತಲಾವರಿಸಿದರೂ ವಿಸ್ತರಿಸಿದ ಸಂಭ್ರಮ... ಗಮನ ಸೆಳೆದ ಕಸ ವಿಲೇವಾರಿ | Kannada Prabha

ಸಾರಾಂಶ

ರಾಜ ಬೀದಿಯ ತುಂಬೆಲ್ಲ ಜನಸಾಗರ... ಎಲ್ಲೆಲ್ಲೂ ಬೀದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಮೊಸರ ಕುಡಿಕೆಗಳು.... ಯಕ್ಷಗಾನೀಯ ಹಿಮ್ಮೇಳವನ್ನು ಕೂಡಿಕೊಂಡು ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಶ್ರೀ ಕೃಷ್ಣ ವೇಷಧಾರಿಗಳು..

ಗಣೇಶ್ ಕಾಮತ್

ಮೂಡುಬಿದಿರೆ: ರಾಜ ಬೀದಿಯ ತುಂಬೆಲ್ಲ ಜನಸಾಗರ... ಎಲ್ಲೆಲ್ಲೂ ಬೀದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಮೊಸರ ಕುಡಿಕೆಗಳು.... ಯಕ್ಷಗಾನೀಯ ಹಿಮ್ಮೇಳವನ್ನು ಕೂಡಿಕೊಂಡು ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಶ್ರೀ ಕೃಷ್ಣ ವೇಷಧಾರಿಗಳು..

ಯಕ್ಷಗಾನೀಯ ಚೆಂಡೆ ಮದ್ದಳೆ ತಾಳದ ಲಯಕ್ಕೆ ವರ್ತುಲಾಕಾರವಾಗಿ ಕುಣಿದು ತನ್ನ ಚಕ್ರಾಯುಧದಿಂದ ಮಡಕೆಗಳನ್ನು ಹೊಡೆದುರುಳಿಸುವ ಶ್ರೀ ಕೃಷ್ಣ. ಈ ಮೊಸರು ಕುಡಿಕೆ ಉತ್ಸವ ಕರಾವಳಿಯಲ್ಲಿ ಬಿಡಿ ನಾಡಿಗೇ ಅಪರೂಪ ಎನ್ನುವಂತೆ ಮೂಡುಬಿದಿರೆಯಲ್ಲಿ ಮಾತ್ರ ಕಾಣಸಿಗುವ ವಿಶೇಷ. ಪೇಟೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವಕ್ಕೆ ಈ ಬಾರಿ 110ರ ಸಂಭ್ರಮ.

ಜೋಡಿ ಕೃಷ್ಣರ ಮೋಡಿ: ಹಲವು ವರ್ಷಗಳಿಂದ ಕೃಷ್ಣನೊಬ್ಬನೇ ಈ ಕುಡಿಕೆಗಳನ್ನು ಒಡೆಯುವುದಿತ್ತು. ಆದರೆ ಈ ಬಾರಿ ಇಬ್ಬರು ಕೃಷ್ಣವೇಷಧಾರಿಗಳು ಉತ್ಸವದಲ್ಲಿ ಕಾಣಿಸಿಕೊಂಡದ್ದು ಹೊಸ ಅಧ್ಯಾಯ. ಮಳಲಿಯ 45 ರ ಹರೆಯದ ಚಂದ್ರಶೇಖರ ಕುಲಾಲ್ ಏಳನೇ ಬಾರಿಗೆ ಕೃಷ್ಣನಾಗಿ ಕಾಣಿಸಿಕೊಂಡರೆ ಕಳೆದ ಬಾರಿ ಚಂದ್ರಶೇಖರ್ ಕುಲಾಲ್ ಗೈರಾಗಬೇಕಾದ ಪರಿಸ್ಥಿತಿಯಲ್ಲಿ ಆ ಸ್ಥಾನವನ್ನು ತುಂಬಿದ್ದ 20 ರ ಹರೆಯದ ಪವನ್ ಕುಲಾಲ್ ಎರಡನೇ ಬಾರಿಗೆ ಶ್ರೀ ಕೃಷ್ಣ ವೇಷಧಾರಿಯಾದರು. ಅವರಿಬ್ಬರೂ ಸಂಬಂಧಿಕರು. ಪವನ್ ಕಟೀಲು ಒಂದನೇ ಮೇಳದ ಕಲಾವಿದರೂ ಹೌದು. ಈ ಬಾರಿ ಅವಳಿ ಕೃಷ್ಣರ ಉಪಸ್ಥಿತಿಯಿಂದಾಗಿ ಉತ್ಸವ ಇನ್ನಷ್ಟು ರಂಗೇರಿತು. ಚಂದ್ರ ಶೇಖರ್ ಎಡಗೈ ಬಳಸಿ ಮಡಿಕೆಗಳನ್ನು ಹೊಡೆದುರುಳಿಸಿದರೆ ಮತ್ತೊಮ್ಮೆ ಪವನ್ ಬಲಗೈ ಬಳಸಿ ಚಕ್ರಾಯುಧದಿಂದ ಮಡಿಕೆಗಳನ್ನು ಒಡೆದರು. ಸಾಮಾನ್ಯವಾಗಿ ಅಪರಾಹ್ನ ಆರಂಭವಾಗುವ ಉತ್ಸವ ಸಂಜೆ ಕತ್ತಲಾವರಿಸುತ್ತಿದ್ದಂತೆ ಮುಗಿದಿರುತ್ತಿತ್ತು. ಆದರೆ ಈ ಬಾರಿ ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡಗಳು, ತಾಳ ಮೇಳಗಳು ಹೀಗೆ ವಿವಿಧ ಕಾರಣಗಳಿಗಾಗಿ ರಾತ್ರಿ 11.30 ಉತ್ಸವ ವಿಸ್ತರಿಸಿತು. ದೇವಸ್ಥಾನದಿಂದ ಪೇಟೆಯಲ್ಲಿ ಸಾಗಿ ಬಂದ ಉತ್ಸವ ಮರಳಿ ದೇವ ಸ್ಥಾನ ತಲುಪಿತು. ಪೂಜಾದಿ ಧಾರ್ಮಿಕ ವಿಧಾನದ ಬಳಿಕ ಯಶೋಧಾ ಕೃಷ್ಣ ಮೂರ್ತಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ನಿಶ್ಮಿತಾ ಸರ್ಕಲ್ ಬಳಿ ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ಕೃಷ್ಣೋತ್ಸವ ಸಂಭ್ರಮದಲ್ಲಿ ಎಕ್ಸಲೆಂಟ್ ಯುವರಾಜ್ ಜೈನ್ ಅವರಿಗೆ ಕೃಷ್ಣೋತ್ಸವ ಪ್ರಶಸ್ತಿ ಪ್ರದಾನ ನಡೆಯಿತು. ಸೆಂಟ್ರಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಸಮಂಜರಿ ಗಮನ ಸೆಳೆಯಿತು. 40 ಮಂದಿ ಪೌರ ಕಾರ್ಮಿಕರ ತಂಡ ರಾತ್ರಿ ಹತ್ತೂವರೆ ಹೊತ್ತಿಗೆ ಉತ್ಸವದ ಕಸವನ್ನು ವಿಲೇವಾರಿ ಸೇರಿದಂತೆ ರಸ್ತೆಗಳನ್ನು ಎಂದಿನಂತೆ ಯಥಾ ಸ್ಥಿತಿಯಲ್ಲಿ ಸ್ವಚ್ಛವಾಗಿರಿಸುತ್ತಾ ಇಳಿ ಹಗಲು 1 ಗಂಟೆಯವರೆಗೂ ಉತ್ಸಾಹದಿಂದ ಕಾರ್ಯ ನಿರತರಾದದ್ದು ಪ್ರಶಂಸೆಗೆ ಪಾತ್ರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಕೃಷ್ಣ ಮಿಷನ್: ಸ್ವಚ್ಛ ಮಂಗಳೂರು ಅಭಿಯಾನ - ಮಾಸಿಕ ಸ್ವಚ್ಛತಾ ಶ್ರಮದಾನ
ಕದ್ರಿ ಕೃಷ್ಣ ವೇಷ ಸ್ಪರ್ಧೆ: ರಾಷ್ಟ್ರೀಯ ಮಕ್ಕಳ ಉತ್ಸವ ಫಲಿತಾಂಶ