ಮೂಡುಬಿದಿರೆ: 110 ವರ್ಷಗಳ ಇತಿಹಾಸ ಹೊಂದಿರುವ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು. 10 ಸಾವಿರಕ್ಕೂ ಅಧಿಕ ಸದಸ್ಯರು ಅಧಿಕೃತವಾಗಿ ಭಾಗವಹಿಸಿದ ಮಹಾಸಭೆಯಲ್ಲಿ ಸಂಘವು 2025-26ನೇ ಸಾಲಿನಲ್ಲಿ ₹12.50 ಕೋಟಿ ನಿವ್ವಳ ಲಾಭ ಗಳಿಸಿರುವುದಾಗಿ ಘೋಷಿಸಲಾಯಿತು.ಸಂಘದ ಅಧ್ಯಕ್ಷ ಸಹಕಾರ ರತ್ನ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರಿಗೆ ಸತತ 26ನೇ ವರ್ಷವೂ ಶೇ.25 ಡಿವಿಡೆಂಡ್ ವಿತರಿಸಲಾಗುವುದು ಎಂದರು. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದ ಕ್ಯಾನ್ಸರ್, ಕಿಡ್ನಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಸದಸ್ಯರಿಗೆ ನೀಡಲಾಗುತ್ತಿದ್ದ ₹15,000 ಸಹಾಯಧನವನ್ನು ₹25,000ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿರುವ ಸದಸ್ಯರಿಗೆ ಸಹಾಯಧನ ನೀಡುವ ಕುರಿತು ಪ್ರಸ್ತಾವನೆ ಮಂಡಿಸಲಾಗಿದ್ದು, ಸಾಲ ಪಡೆದ ಸದಸ್ಯರು ನಿಧನರಾದರೆ ಅವರ ವಾರಸುದಾರರು ಪಾವತಿಸಬೇಕಾದ ಸಾಲದ ಬಾಕಿ ಮೊತ್ತದಲ್ಲಿ ₹1 ಲಕ್ಷ ವಿನಾಯಿತಿ ನೀಡಲಾಗುವುದು ಎಂದರು.ಸಂಘದಲ್ಲಿ ವಿಶೇಷವಾಗಿ ಸೌರಶಕ್ತಿ ಯೋಜನೆಗಳಿಗೆ ₹5 ಲಕ್ಷದವರೆಗೆ ಶೇ.5 ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಸದಸ್ಯರು ಇದರ ಪ್ರಯೋಜನ ಪಡೆಯುವಂತೆ ಬಾಹುಬಲಿ ಪ್ರಸಾದ್ ಮನವಿ ಮಾಡಿದರು.
ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಭಟ್,ಉಪಾಧ್ಯಕ್ಷ ಎಂ. ಗಣೇಶ ನಾಯಕ್, ನಿರ್ದೇಶಕರಾದ ಕೆ. ಅಭಯಚಂದ್ರ ಜೈನ್, ಮನೋಜ್ ಶೆಟ್ಟಿ, ಸಿ. ಎಚ್ ಗಫೂರ್, ಎಂ. ಪಿ ಅಶೋಕ್ ಕಾಮತ್, ಎಂ. ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಎಂ. ಪದ್ಮನಾಭ, ಪ್ರೇಮ ಎಸ್. ಸಾಲ್ಯಾನ್, ಅನಿತಾ ಪಿ. ಶೆಟ್ಟಿ ಉಪಸ್ಥಿತರಿದ್ದರು. ಸುಜಾತಾ ಮಹಾಸಭೆಯ ಸೂಚನಾ ಪತ್ರವನ್ನು ವಾಚಿಸಿದರು. ಸಂತೋಷ ನಾಯ್ಕ್ ಲೆಕ್ಕಪತ್ರ ಮಂಡಿಸಿದರು. ಹೆರಾಲ್ಡ್ ತಾವ್ರೋ ಅಂದಾಜು ಬಜೆಟ್ ಮಂಡಿಸಿದರು.
ಸಹಸ್ರಾರು ಸಹಕಾರಿಗಳು ದಾಖಲೆ ಮಹಾಸಭೆ: ಏಳು ಸಾವಿರಕ್ಕೂ ಮಿಕ್ಕಿದ ಸದಸ್ಯರೂ ಸೇರಿದಂತೆ ಒಟ್ಟು ಹತ್ತು ಸಾವಿರದಷ್ಟು ಸಹಕಾರಿ ಬಂಧುಗಳು ಮೂಡುಬಿದಿರೆ ಸೊಸೈಟಿಯ ಮಹಾಸಭೆಗೆ ಹರಿದು ಬಂದು ವಿಶೇಷ ದಾಖಲೆಗೆ ಕಾರಣರಾದರು. ಸದಸ್ಯರಿಗೆ ಗೃಹೋಪಯೋಗಿ ಉಡುಗೊರೆ, ಸಾಮೂಹಿಕ ಉಪಹಾರ ಗಮನ ಸೆಳೆಯಿತು.ಮಹಾಸಭೆಯಲ್ಲಿ ಉಪಹಾರ ವ್ಯವಸ್ಥೆಗಾಗಿ ಯಾವುದೇ ಟಿಶ್ಯೂ ಪೇಪರ್, ಪೇಪರ್ ಕಪ್, ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ತಟ್ಟೆ, ಚಮಚ ಅಥವಾ ಇತರ ಏಕಬಳಕೆಯ ವಸ್ತುಗಳನ್ನು ಬಳಸಲಿಲ್ಲ. ಅದರ ಬದಲಿಗೆ ಮರುಬಳಕೆ ಮಾಡಬಹುದಾದ ಸ್ಟೀಲ್ ತಟ್ಟೆ ಮತ್ತು ಲೋಟಗಳನ್ನೇ ಬಳಸಲಾಯಿತು. ನೆನಪಿನ ಕಾಣಿಕೆಯಾಗಿ ಸ್ಟೀಲ್ ಬಾಲ್ದಿ ವಿತರಣೆ ವೇಳೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನೀಡದೇ ಸಾವಿರಾರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳ ಬಳಕೆ ತಪ್ಪಿಸಲಾಯಿತು.