ಪ್ರಸ್ತುತ ಕಾಲಘಟ್ಟದಲ್ಲಿ ಜನರಲ್ಲಿ ನೈತಿಕ ಜಾಡ್ಯ ಆವರಿಸಿದೆ: ಶಿವಾಚಾರ್ಯರು

KannadaprabhaNewsNetwork |  
Published : Dec 30, 2025, 02:45 AM IST
ಫೋಟೊ ಶೀರ್ಷಿಕೆ: 29ಆರ್‌ಎನ್‌ಆರ್4ರಾಣಿಬೆನ್ನೂರು ನಗರದ ಎಪಿಎಂಸಿ ರಸ್ತೆ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿದರು.  | Kannada Prabha

ಸಾರಾಂಶ

ಪ್ರಸ್ತುತ ಕಾಲಘಟ್ಟದಲ್ಲಿ ಜನರಲ್ಲಿ ನೈತಿಕ ಜಾಡ್ಯ ಆವರಿಸಿದೆ ಎಂದು ಶ್ರೀ ತರಳಬಾಳು ಶಾಖಾಮಠ ಸಾಣೇಹಳ್ಳಿಯ ಡಾ.ಪಂಡಿತರಾಧ್ಯ ಶಿವಾಚಾರ್ಯರು ನುಡಿದರು.

ರಾಣಿಬೆನ್ನೂರು: ಪ್ರಸ್ತುತ ಕಾಲಘಟ್ಟದಲ್ಲಿ ಜನರಲ್ಲಿ ನೈತಿಕ ಜಾಡ್ಯ ಆವರಿಸಿದೆ ಎಂದು ಶ್ರೀ ತರಳಬಾಳು ಶಾಖಾಮಠ ಸಾಣೇಹಳ್ಳಿಯ ಡಾ.ಪಂಡಿತರಾಧ್ಯ ಶಿವಾಚಾರ್ಯರು ನುಡಿದರು. ನಗರದ ಎಪಿಎಂಸಿ ರಸ್ತೆ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನುಷ್ಯ ಸರಿ ತಪ್ಪುಗಳ ವಿವೇಚನೆಯಿಲ್ಲದಂತೆ ವರ್ತಿಸುವುದು ಹಾಗೂ ಮೌಲ್ಯಗಳ ಬಗ್ಗೆ ಅಸಡ್ಡೆ, ಉದಾಸಿನ ಹೊಂದಿದ್ದರೆ ಅದು ನೈತಿಕ ಜಾಡ್ಯವಾಗಿದೆ. ಹೊತ್ತು ಬಂದಂತೆ ಕೊಡೆ ಹಿಡಿಯದೆ, ನೈತಿಕ ನೆಲಗಟ್ಟು ಕುಸಿಯದಂತೆ, ಆದರ್ಶಗಳು ಗಾಳಿ ಪಾಲಾಗದಂತೆ, ಜವಾಬ್ದಾರಿಯುತ ಬದುಕನ್ನು ಅಪ್ಪಿಕೊಳ್ಳುವ ಸಂಕಲ್ಪ ತಳೆಯಬೇಕು ಎಂದರು. ಶರಣ ಸಾಹಿತ್ಯ ಸಮ್ಮೇಳನ ಉದ್ದೇಶ ಶರಣರ ನಡೆ, ನುಡಿ, ಸಿದ್ಧಾಂತಗಳನ್ನು ವ್ಯಕ್ತಿಗತ ಬದುಕಿನ ಅಮೂಲ್ಯ ಬಂಡವಾಳ ಮಾಡಿಕೊಳ್ಳುವುದು. ವ್ಯಕ್ತಿಯ ಬದುಕು ಸಾರ್ಥಕವಾಗಲು ಶರಣರ ಆದರ್ಶಗಳನ್ನು ಸ್ಮರಿಸುತ್ತ ಅವರ ದಾರಿಯಲ್ಲಿ ನಡೆಯುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶರಣರ ಆದರ್ಶಗಳು ದಾರಿದೀಪವಿದ್ದಂತೆ. ಅವು ಬದುಕಿಗೆ ಬೇಕಾದ ಎಲ್ಲ ತತ್ವ, ಸತ್ವ ಮತ್ತು ಮಾಹಿತಿಯನ್ನು ಒದಗಿಸುತ್ತವೆ. 12ನೇ ಶತಮಾನದ ಶರಣರ ವಚನಗಳ ಮತ್ತು ವಚನಕಾರರ ಬದುಕಿನ ಆದರ್ಶ ತತ್ವ ಸಿದ್ಧಾಂತಗಳ ಅರಿವುಳ್ಳವರಾಗಿ ಅವುಗಳ ಮೂಲಕ ಪ್ರತಿಯೊಬ್ಬರೂ ವ್ಯಕ್ತಿಗತ ಬದುಕಿನ ಸಿಂಹಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರು ಕೇವಲ ಸಮಾಜ ಮತ್ತು ಧಾರ್ಮಿಕ ಸುಧಾರಣೆಯ ನೇತಾರರಾಗಿರಲಿಲ್ಲ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎನ್ನುವ ಭೃತ್ಯಾಚಾರ ಮೈಗೂಡಿಸಿಕೊಂಡಿದ್ದರು. ನುಡಿದಂತೆ ನಡೆದು ತಮ್ಮ ಆದರ್ಶ ಬದುಕಿನ ಮೂಲಕವೇ ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿಯ ಬೀಜಗಳನ್ನು ಬಿತ್ತಿ ಬೆಳೆದವರು. ಅವರು ಚಿಂತನೆಗಳು ಸರ್ವಕಾಲಕ್ಕೂ ಮಾನ್ಯವಾದವುಗಳು. ಶರಣರ ವಚನಗಳು ಕೇವಲ ರಚನೆಗಳಲ್ಲ, ಅವು ಬಸವಾದಿ ಶಿವಶರಣರ ಅನುಭವ ಮತ್ತು ಅನುಭಾವದ ರಸಪಾಕವಿದ್ದಂತೆ. ಅವು ಆದರ್ಶ ಬದುಕಿನ ವಿಧಾನಕ್ಕೆ ಹಿಡಿದ ಕನ್ನಡಿಯಾಗಿವೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ತಾಕತ್ತು ವಚನಗಳಿಗಿದೆ. ಪೋಷಕರು ತಮ್ಮ ಮನೆಯಲ್ಲಿ ವಚನ ಪುಸ್ತಕಗಳನ್ನು ಸಂಗ್ರಹಿಸಿ ಓದುವ ಮತ್ತು ಅವುಗಳನ್ನು ಮಕ್ಕಳಿಗೆ ಓದಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬಹುದೇವತಾರಾಧನೆಯ ಬದಲಾಗಿ ಅಂಗದ ಮೇಲೆ ಇಷ್ಟಲಿಂಗವನ್ನು ಧರಿಸಿ ಅದನ್ನೇ ಪೂಜೆ ಮಾಡಬೇಕು ಎಂದರು. ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಮ್ಮ ತಿಳವಳ್ಳಿ, ಸುನಂದಮ್ಮ ತಿಳವಳ್ಳಿ, ವಸಂತ ಹುಲ್ಲತ್ತಿ ಮತ್ತಿತರರಿದ್ದರು. ಶರಣರು ಮದ್ಯಪಾನ ವಿರೋಧಿಯಾಗಿದ್ದರು. ಆದರೆ ಇಂದು ಸರ್ಕಾರ ಮನೆ ಮನೆಗೆ ಮದ್ಯ ಮುಟ್ಟಿಸುವ ಆಲೋಚನೆಯಲ್ಲಿದೆ. 569 ಬಾರ್‌ಗಳಿಗೆ ಹೊಸದಾಗಿ ಲೈಸೆನ್ಸ್ ಹರಾಜು ಮಾಡುವುದಾಗಿ ಪ್ರಕಟಿಸಿತ್ತು. ಅದರಿಂದ ಐದು ವರ್ಷಗಳಲ್ಲಿ 700 ಕೋಟಿಗೂ ಮೀರಿ ಆದಾಯ ನಿರೀಕ್ಷೆಯಿದೆಯಂತೆ. ಜನರ ಆರೋಗ್ಯಕ್ಕಿಂತ ಸರ್ಕಾರಕ್ಕೆ ಬರುವ ಆದಾಯವೇ ಮುಖ್ಯವಾಗಿದೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ