ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಾಶ್ಚಿಮಾತ್ಯ ದೇಶಗಳ ಉಡುಗೆ ತೊಡುಗೆ ಹಾಗೂ ಇತರೆ ಕಾರಣಗಳಿಗೆ ಆಕರ್ಷಿತರಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ಗುರು, ಹಿರಿಯರು, ತಂದೆ, ತಾಯಿ ಮತ್ತು ಪೋಷಕರಿಗೆ ಹಿಂದಿನಂತೆ ಗೌರವ ಕೊಡುವುದಿಲ್ಲ ಎಂದು ದೊಡ್ಡಕಾಡನೂರು ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜು ವತಿಯಿಂದ ತಾ. ಎಲೆಚಾಗಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಓದಿದರೆ ಮಾತ್ರ ಸಾಲದು, ಓದಿನ ಜೊತೆಗೆ ಸಂಸ್ಕಾರವಂತರು ಆಗಬೇಕು. ಅಂಕಪಟ್ಟಿಯಲ್ಲಿ ಅಂಕಗಳನ್ನು ಸಂಪಾದಿಸುವುದರ ಜೊತೆಗೆ ಉತ್ತಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯೊಂದಿಗೆ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಬೇಕು. ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಬಹಳಷ್ಟು ವಿಷಯಗಳನ್ನು ಕಲಿಯಲು ಅವಕಾಶವಿದೆ ಮತ್ತು ಇಲ್ಲಿ ಕಲಿತಂತಹ ವಿಷಯಗಳನ್ನು ತಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಕಲೇಶಪುರ ತಾಲೂಕಿನ ಮಾಸವಳ್ಳಿಯ ಸಾವಯವ ಕೃಷಿಕರಾದಂತಹ ಕುಮಾರಸ್ವಾಮಿ ಎಚ್.ಸಿ. ಅವರು ಸಾವಯವ ಕೃಷಿಯ ಪ್ರಾಮುಖ್ಯತೆ ಹಾಗೂ ಸಾವಯವ ಕೃಷಿಯನ್ನು ಅನುಸರಿಸಿ ಬೆಳೆದಿರುವಂತಹ ಆಹಾರ ಪದಾರ್ಥಗಳ ಬಗ್ಗೆ ತಿಳಿಸಿಕೊಟ್ಟು, ಅವುಗಳ ಬಳಕೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಕಿವಿಮಾತು ಹೇಳಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆಶಾಜ್ಯೋತಿ ಯು.ಹೆಚ್. ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣಮೂರ್ತಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಜಿತೇಂದ್ರ ಸಿಂಗ್, ಕನ್ನಡ ಉಪನ್ಯಾಸಕ ಉಮೇಶ್ ಸಿ.ಹೆಚ್, ಮನಶಾಸ್ತ್ರ ಉಪನ್ಯಾಸಕ ಕರಿಯಪ್ಪ ಲಮಾಣಿ, ಶಿಭಿರಾಧಿಕಾರಿ ಫಕೀರಮ್ಮ ಪಿ. ಮುರಗೋಡ, ಸಹ ಸಿಬಿರಾದಿಕಾರಿ ಜಗದೀಶ್ ಸಿ.ಬಿ., ಲೋಕೇಶ್, ಮುಖಂಡರಾದ ಶಿವಣ್ಣ, ಶಿವಕುಮಾರ್, ಆಶಾ ಕಾರ್ಯಕರ್ತೆ ವೇದಾವತಿ, ಎನ್‌ಎಸ್‌ಎಸ್ ಶಿಬಿರಾರ್ಥಿಗಳಾದ ಅನುಶ್ರೀ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸೌಂಧರ್ಯ ಸ್ವಾಗತಿಸಿದರು. ಅನುಶ್ರೀ ವಂದನಾರ್ಪಣೆ ನೆರವೇರಿಸಿದರು. ಸಿಂಚನಾ ನಿರೂಪಣೆ ಮಾಡಿದರು.