ಪೈಗಂಬರರ ಶಾಂತಿಯ ಸಂದೇಶಗಳು ಇಂದಿಗೂ ಪ್ರಸ್ತುತ: ಡಾ.ಜಿ.ಪರಮೇಶ್ವರ್

KannadaprabhaNewsNetwork | Published : Mar 16, 2025 1:45 AM

ಸಾರಾಂಶ

ಪ್ರವಾದಿ ಮಹಮದ್ ಪೈಗಂಬರ್ ಅವರು ಬೋಧಿಸಿದ ಶಾಂತಿಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಬೋಧನೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗೋಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರವಾದಿ ಮಹಮದ್ ಪೈಗಂಬರ್ ಅವರು ಬೋಧಿಸಿದ ಶಾಂತಿಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಬೋಧನೆಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗೋಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ಪಟ್ಟರು.

ನಗರದ ಬಾರ್ ಲೈನ್ ರಸ್ತೆಯ ಮೆಕ್ಕಾ ಮಸೀದಿಯಲ್ಲಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಶಾಂತಿ ಪ್ರಕಾಶನ ಹೊರತಂದಿರುವ ರಂಜಾನ್ ಬದಲಾವಣೆ ಮತ್ತು ಶಾಂತಿಯ ದಿನಗಳು ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕ್ರಿಪೂದಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಹೆಚ್ಚಾದಾಗ ಜಮ್ಹ್ ಜಮ್ಹ್ ಬೆಟ್ಟದ ಮೇಲೆ ನಿಂತು ಭಗವಂತನ ಸಂದೇಶವನ್ನು ಸಾರಿದ್ದರು. ಶಾಂತಿಯಿಂದ, ಪರಸ್ಪರರಲ್ಲಿ ನಂಬಿಕೆ ಮತ್ತು ಸಹೋದರತೆಯಿಂದ ಬದುಕಬೇಕೆಂದು ಸಂದೇಶ ನೀಡಿದ್ದರು. ಇಂದಿಗೂ ಅದು ಪ್ರಸ್ತುತ ವಾಗಿದೆ ಎಂದರು.

ರಂಜಾನ್ ಮಾಸ ಅಲ್ಪ ಸಂಖ್ಯಾತರಿಗೆ ಏಕೆ ಪವಿತ್ರ ಎಂದರೆ, ಈ ಮೂವತ್ತು ದಿನಗಳು ಸಮಾಜದಲ್ಲಿ ಯಾವುದೇ ಆಶಾಂತಿ ಮೂಡದಂತೆ ತಮ್ಮ ಮನಸ್ಸು ಮತ್ತು ಇಂದ್ರೀಯಗಳ ನಿಗ್ರಹಿಸಿಕೊಂಡು ಓರ್ವ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ದೇವರು ನೀಡಿದ ಅವಕಾಶವಾಗಿದೆ. ಇದನ್ನು ಎಲ್ಲರೂ ಸದ್ವಿನಿಯೋಗ ಮಾಡಿಕೊಳ್ಳೋಣ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ತುಮಕೂರು ಜಿಲ್ಲೆ ಶಾಂತಿಗೆ ಹೆಸರಾದ ಜಿಲ್ಲೆ. ನಾವು ಚಿಕ್ಕಂದಿನಿಂದಲೂ ನೋಡಿಕೊಂಡು ಬೆಳೆದಿದ್ದೇವೆ. ಪರಸ್ವರರು ಒಗ್ಗೂಡಿ ಹಬ್ಬ, ಹರಿದಿನಗಳು, ಉರುಸ್ ಆಚರಿಸಿಕೊಂಡು ಬರುತ್ತಿದ್ದಾರೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಸಂವಿಧಾನದಲ್ಲಿಯೇ ಎಲ್ಲರ ಧರ್ಮಗಳ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿಯೇ 2023 ರ ಚುನಾವಣಾ ಪ್ರಣಾಳಿಕೆಗೆ ಇಟ್ಟ ಹೆಸರು ಸರ್ವ ಜನಾಂಗದ ಶಾಂತಿ ತೋಟ, ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿಂದ ಒಂದು ಒಳ್ಳೆಯ ಸಮಾಜವನ್ನು ಕಟ್ಟಲು ಮುಂದಾಗೋಣ ಎಂದು ನುಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ರಂಜಾನ್ ಪವಿತ್ರವಾದ ತಿಂಗಳು, ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಧರ್ಮ, ಜಾತಿಯ ಹೆಸರಿನಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಜನರಿಗೆ ಒಳ್ಳೆಯ ಬುದ್ಧಿಯನ್ನು ನೀಡಲಿ, ದೇಶದಲ್ಲಿ ಶಾಂತಿ ನಲೆಸುವಂತಾಗಲಿ ಎಂದು ಶುಭ ಹಾರೈಸಿದರು.

ಡಾ.ಎಸ್.ಷಪಿ ಅಹಮದ್ ಮಾತನಾಡಿ, ಈ ರಂಜಾನ್ ಮುಸ್ಲಿಂ ಸಮುದಾಯದ ಪವಿತ್ರ ಮಾಸವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸುಮಾರು 4 ಸಾವಿರ ಕೋಟಿ ನೀಡಿದೆ. ಅಲ್ಲದೆ ಶೇ. 4ರಷ್ಟು ಮೀಸಲಾತಿ ನೀಡಿ ಸಮುದಾಯದ ಬೆಳೆವಣಿಗೆಗೆ ಸಹಕಾರ ನೀಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರಿಗೆ, ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

Share this article