ಕನ್ನಡಪ್ರಭ ವಾರ್ತೆ ಹನೂರುಚಾಮರಾಜನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪೈಕಿ ಹನೂರು ಪಟ್ಟಣ ಪಂಚಾಯಿತಿ ಬಗ್ಗೆ ಹೆಚ್ಚು ದೂರುಗಳು ಬರುತ್ತಿರುವುದರಿಂದ ಸಿಬ್ಬಂದಿಗೆ ಸೂಕ್ತ ಎಚ್ಚರಿಕೆ ನೀಡಿದ್ದು ಮುಂದಿನ ದಿನಗಳಲ್ಲಿ ದೂರು ಬಾರದಂತೆ ಕ್ರಮವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು.ಹನೂರು ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಶೀಲನೆ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ಹನೂರು ಪಪಂಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗದೆ ಮಧ್ಯವರ್ತಿಗಳ ಕೆಲಸ ಮಾತ್ರ ತ್ವರಿತಗತಿಯಲ್ಲಿ ಆಗುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು ಪಟ್ಟಣದ 13 ವಾರ್ಡ್‌ಗಳ ಕೆಲಸ ಕಾರ್ಯಗಳು ಸುಗಮವಾಗಿ ಆಗಬೇಕು, ಇನ್ನು ಮೂರು ತಿಂಗಳೊಳಗೆ ಎಲ್ಲ ಸಮಸ್ಯೆಗಳು ಮುಗಿಯಬೇಕು ಎಂದು ತಿಳಿಸಲಾಗಿದೆ. ಹಾಗೂ ಸಾರ್ವಜನಿಕರು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ ಸ್ಪಂದಿಸಬೇಕು ಅದು ನಮ್ಮ ಜವಾಬ್ದಾರಿ, ಮುಂದಿನ ದಿನಗಳಲ್ಲಿ ಕರೆ ಸ್ವೀಕರಿಸದಿದ್ದರೆ ನನ್ನ ಗಮನಕ್ಕೆ ತನ್ನಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪಟ್ಟಣದ ಹದಿಮೂರು ವಾರ್ಡ್‌ಗಳಲ್ಲೂ ಸಾಕಷ್ಟು ಸಮಸ್ಯೆಗಳಿದ್ದು ಸ್ಥಳೀಯ ಶಾಸಕರು, ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರ ಜೊತೆ ಸಭೆ ನಡೆಸಲಾಗಿದ್ದು ಬಂದಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕುಡಿಯುವ ನೀರು, ಸ್ವಚ್ಛತೆ ಬೀದಿ ದೀಪ, ನಿರ್ವಹಣೆ ಜೊತೆಗೆ ಯುಜಿಡಿ ಕಾಮಗಾರಿ ನಡೆಸಲು ತಿಳಿಸಲಾಗಿದೆ. ಇದಕ್ಕೆ ಪಟ್ಟಣದ ನಾಗರಿಕರು ಸಹಕಾರ ನೀಡಬೇಕು, ಈಗಾಗಲೇ ಯುಜಿಡಿ ಸರ್ವೇ ಮುಗಿದಿದ್ದು ಸರ್ಕಾರಕ್ಕೆ ವರದಿ ನೀಡಲಾಗಿದೆ. ಸರ್ಕಾರ ಅನುದಾನ ಮಂಜೂರು ಮಾಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.ಸಿಬ್ಬಂದಿ ಕೊರತೆಗೆ ಕ್ರಮ:
ಪಟ್ಟಣ ಪಂಚಾಯಿತಿಯಲ್ಲಿ ಇರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎರಡೂವರೆ ಲಕ್ಷ ರು.ವೆಚ್ಚದ ಕಾಮಗಾರಿ ಮಾಡಲು ಎರಡೂವರೆ ವರ್ಷ ಬೇಕಾ? ಇದನ್ನು ನೋಡಿದರೆ ನಿಮ್ಮ ಕಾರ್ಯವೈಖರಿ ಹೇಗಿದೆ ಎಂಬುದು ತಿಳಿಯುತ್ತದೆ. ಈ ಕೂಡಲೇ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ:
ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ಮಾತನಾಡಿ, ಈಗಾಗಲೇ ಬಡವರ ಹಸಿವು ನೀಗಿಸಲು ಹನೂರು ತಾಲೂಕಿಗೆ ಇಂದಿರಾ ಕ್ಯಾಂಟೀನ್ ಮಂಜೂರಾಗಿದೆ. ಸರ್ಕಾರಿ ಆಸ್ಪತ್ರೆಯ ಬಳಿ ನಿವೇಶನ ನಿಗದಿ ಮಾಡಿದ್ದು ಆ ಸ್ಥಳದಲ್ಲಿಯೇ ಇಂದಿರಾ ಕ್ಯಾಂಟೀನ್ ತೆರೆಯಬೇಕು ಎಂದು ಮನವಿ ಮಾಡಿದರು. ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಿಲ್ಲ. ಅಧಿಕಾರಿಗಳು ಸಿಬ್ಬಂದಿ ವರ್ಗದವರು ಜನಪ್ರತಿನಿಧಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಹೀಗಾಗಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಸ್ವಚ್ಛತೆಗೂ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಸದಸ್ಯ ಸೋಮಶೇಖರ್ ಮಾತನಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹತ್ತನೇ ವಾರ್ಡಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಈಗಾಗಲೇ ಮುಖ್ಯಾಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ತಾವುಗಳು ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಮುಮ್ತಾಜ್ ಬಾನು ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಗಿರೀಶ್, ಹರೀಶ್ ಸುದೇಶ್ ,ಸೋಮಶೇಖರ್, ರೂಪ, ಮಂಜುಳಾ, ಪವಿತ್ರ, ಮಹೇಶ್ ನಾಯಕ, ತಹಸೀಲ್ದಾರ್ ಗುರುಪ್ರಸಾದ್, ಮುಖ್ಯಾಧಿಕಾರಿ ಅಶೋಕ್, ಎಇಇ ಮಂಜುನಾಥ್ ಮತ್ತಿತರರು ಹಾಜರಿದ್ದರು.