ಆನವಟ್ಟಿ: ಶರಾವತಿಯಿಂದ ಪೈಪ್‌ಲೈನ್ ಮೂಲಕ ತಾಲೂಕಿಗೆ ನೀರು ತರುವ ಜೊತೆಗೆ ದಂಡಾವತಿ ಯೋಜನೆ ಗೆ 900 ಕೋಟಿ ರು. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಅದಕ್ಕೆ 200 ಕೋಟಿ ರು. ಅನುದಾನ ಸಿದ್ಧವಿದೆ. ಈ ಯೋಜನೆಗಳು ಅನುಷ್ಠಾನಗೊಳುವುದು ಶತಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಆನವಟ್ಟಿ ಸಮೀಪದ ಲಕ್ಕವಳ್ಳಿ ಗ್ರಾಮದ ಮೋಕ್ಷಮಂದಿರ ಸಂಸ್ಥಾನ ಜೈನ ಮಠದ ವರದಾ ನದಿಯಿಂದ ಸಂರಕ್ಷಣೆಗೆ ಅಂದಾಜು 5 ಕೋಟಿ ರು. ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ನುಡಿದಂತೆ ನಡೆಯುವ ಮೂಲಕ ರಾಜ್ಯದ ಜನರಿಗೆ ಪಂಚ ಗ್ಯಾರಂಟಿಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಆರ್ಥಿಕ ಹೊರೆಯನ್ನು ತಗ್ಗಿಸಿದೆ. ಇನ್ನೂಂದು ಹೆಜ್ಜೆ ಮುಂದೆ ಹೋಗಿ ನೀರಾವರಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಲಾಗುತ್ತಿದೆ ಎಂದರು.
ನಾನು ಶಾಸಕನಾಗಿದ್ದಾಗ, ಹೊಳೆಲಿಂಗೇಶ್ವರ ದೇವಸ್ಥಾನದ ಮುಂಭಾಗ ತಡೆಗೋಡೆ ನಿರ್ಮಿಸಿದ್ದೆ, ಈಗ ಸಚಿವನಾಗಿ ಜೈನ ಮಠಕ್ಕೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂದಾಜು 5 ಕೋಟಿ ರು. ವೆಚ್ಚದಲ್ಲಿ ರಕ್ಷಣಾ ತಡೆಗೋಡೆ ನಿರ್ಮಿಸಲು ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.ದೇಶದಲ್ಲೇ ಅತೀ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು ಸೊರಬ, ಕೆರೆಗಳ ಸಂರಕ್ಷಣೆ, ಜಾನುವಾರುಗಳಿಗೆ ಕುಡಿಯುವ ನೀರು, ರೈತರ ಬೆಳೆಗಳಿಗೆ ನೀರಾವರಿ ಒದಗಿಸುವ ದೃಷ್ಟಿಯಿಂದ ಇನ್ನೂ ಹತ್ತಾರು ತಡೆಗೋಡೆ, ಬ್ಯಾರೇಜ್‌ಗಳನ್ನು ಒದಗಿಸಬೇಕಾಗುತ್ತದೆ ಎಂದರು.
ಈಗಾಗಲೇ ನಮ್ಮ ತಂದೆ ಅವರು ಶಂಕುಸ್ಥಾಪನೆ ಮಾಡಿರುವ, ಕನಸ್ಸಿನ ಯೋಜನೆಗಳಾದ ಮೂಗುರು, ಮೂಡಿ, ಕಚವಿ ಏತನೀರಾವರಿ ಅನುಷ್ಠಾನ ಆಗಿದ್ದು, ನೀರಾವರಿಗಾಗಿ ನಾನು ಪಾದಯಾತ್ರೆ ಮಾಡಿ, ನಾನು ಸೋತರೂ, ಅಧಿಕಾರದ ಆಸೆ ಬಿಟ್ಟು, ಜಿಲ್ಲೆಯ ನೀರಾವರಿಗೆ 1800 ಕೋಟಿ ರು. ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಜನಸಾಮಾನ್ಯ, ರೈತರ ಭಾವನೆಗಳನ್ನು ಆರ್ಥ ಮಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು 1991ರಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂದಾಗ ಜನರ ಕಷ್ಟ ಹೇಳಿ ಕೆರೆ ಅವೃದ್ಧಿಗೆ ಅನುದಾನ ಕೇಳಿದ್ದೇವು, ತಕ್ಷಣವೇ ಆ ಕಾಲದಲ್ಲೇ 22 ಕೋಟಿ ರು. ಅನುದಾನ ನೀಡಿದ್ದರು. ಈಗಲೂ ಆ ಕೆರೆಯನ್ನು ಬಂಗಾರಪ್ಪ ಕೆರೆ ಅಂತಲ್ಲೇ ಕರೆಯುತ್ತೇವೆ ಎಂದು ಸ್ಮರಿಸಿದರು.
ಸರ್ಕಾರ ಚನ್ನಾಗಿ ನಡೆಯಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಚನ್ನಾಗಿರಬೇಕು. ಪ್ರಾರಂಭದಲ್ಲಿ ಪ್ರಾಥಮಿಕ ಶಿಕ್ಷಣ ಖಾತೆಯನ್ನು ಮಧು ಬಂಗಾರಪ್ಪ ಅವರಿಗೆ ನೀಡಿದಾಗ ನನಗೆ ಅನುಮಾನವಿತ್ತು. ಸಾಮಾನ್ಯವಾಗಿ ಯಾರು ಪ್ರಾಥಮಿಕ ಶಿಕ್ಷಣ ಖಾತೆ ಪಡೆಯಲು ಮುಂದಾಗುವುದಿಲ್ಲ. ಬಂಗಾರಪ್ಪ ಅವರ ಗುಣ, ಸ್ವಭಾವವನ್ನು ಮೈಗೊಡಿಸಿಕೊಂಡಿರುವ ಮಧು ಬಂಗಾರಪ್ಪ ಅವರು ರಾಜ್ಯದ ಎಲ್ಲಾ ಭಾಗದ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಪೌಷ್ಟಿಕಾಂಶ ಆಹಾರ ನೀಡುವುದರಿಂದ ಪ್ರಾರಂಭವಿಸಿ, ಕಟ್ಟಡ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಮರ್ಥವಾಗಿ ಪ್ರಾಥಮಿಕ ಶಿಕ್ಷಣ ಖಾತೆಯನ್ನು ನಿಭಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸೊರಬ ತಾಲೂಕಿನ ನೀರಾವರಿಗೆ ಆದ್ಯತೆ ಮೇರೆಗೆ ಹಂತ-ಹಂತವಾಗಿ ಅನುದಾನ ಒದಗಿಸಿಕೊಂಡುವುದಾಗಿ ಅವರು ಭರವಸೆ ನೀಡಿದರು.
ಜೈನ ಮಠದ ವೃಷಭಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಬ್ಲಾಕ್ ಅಧ್ಯಕ್ಷರಾದ ಸದಾನಂದ ಗೌಡ ಪಾಟೀಲ್ ಬಿಳಗಲಿ, ಅಣ್ಣಪ್ಪ ಹಾಲಘಾಟ್ಟ, ಮುಖಂಡರಾದ ನಾಗರಾಜ ಗೌಡ ಶಿಕಾರಿಪುರ, ಕಲಗೋಡು ರತ್ನಾಕರ, ಕೆ.ಪಿ.ರುದ್ರಗೌಡ, ಚೌಟಿ ಚಂದ್ರಶೇಖರ್ ಪಾಟೀಲ್, ಬಸವಲಿಂಗಪ್ಪ, ಶಿವಲಿಂಗೇಗೌಡ, ಎಲ್.ಜಿ.ಮಾಲತೇಶ, ಎಲ್.ಜಿ ಕೃಷ್ಣಾ, ಬಸವರಾಜಪ್ಪ ಇದ್ದರು.