ಕಾನೂನು ರಕ್ಷಕರ ಹೆಸರಲ್ಲೇ ಹೆಚ್ಚು ಆನ್‌ಲೈನ್‌ ವಂಚನೆ!

KannadaprabhaNewsNetwork |  
Published : Sep 22, 2024, 01:55 AM IST
ಎಸ್ಪಿ ಎಂ. ನಾರಾಯಣ. ಸಿಪಿಐ ಜಯರಾಜ್.  | Kannada Prabha

ಸಾರಾಂಶ

ಆನ್‌ಲೈನ್ ಆರ್ಥಿಕ ವಂಚನೆಯ ಹೆಚ್ಚಿನ ಪ್ರಕರಣಗಳು ಕಾನೂನು ರಕ್ಷಕರ ವೇಷದಲ್ಲೇ ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಉಕ ಜಿಲ್ಲೆಯಲ್ಲೆ 6ಕ್ಕೂ ಹೆಚ್ಚು ಪೊಲೀಸ್ ಅಧಿಕಾರಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ತೆರೆದುಕೊಂಡಿವೆ.

ರಾಘು ಕಾಕರಮಠ

ಅಂಕೋಲಾ: ಆನ್‌ಲೈನ್ ಆರ್ಥಿಕ ವಂಚನೆಯ ಹೆಚ್ಚಿನ ಪ್ರಕರಣಗಳು ಕಾನೂನು ರಕ್ಷಕರ ವೇಷದಲ್ಲೇ ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಉಕ ಜಿಲ್ಲೆಯಲ್ಲೆ 6ಕ್ಕೂ ಹೆಚ್ಚು ಪೊಲೀಸ್ ಅಧಿಕಾರಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ತೆರೆದುಕೊಂಡಿವೆ. ಉಕ ಜಿಲ್ಲೆಯ ಎಸ್‌ಪಿ ಎಂ. ನಾರಾಯಣ, ಈ ಹಿಂದಿನ ನಿಕಟಪೂರ್ವ ಎಸ್‌ಪಿ ವಿಷ್ಣುವರ್ಧನ, ಕರಾವಳಿ ಕಾವಲು ಪಡೆಯ ಪೊಲೀಸ್ ನೀರಿಕ್ಷಕ ಸಂಪತ್ತಕುಮಾರ, ಸಿಪಿಐ ಎಚ್. ಜಯರಾಜ್, ಪಿಎಸ್‌ಐಗಳಾದ ಪ್ರವೀಣಕುಮಾರ, ಸಿದ್ದು ಗುಡಿ, ಮುಸಾಯಿದ್ದೀನ್, ಅನಿಲ ಮಾದರ ಇನ್ನು ಅನೇಕ ಅಧಿಕಾರಿಗಳು ಫೇಸ್‌ಬುಕ್‌ ನಕಲಿ ಖಾತೆಗಳಿವೆ.

ಪೊಲೀಸರದ್ದೆ ಹೆಚ್ಚೇಕೆ?: ಪೊಲೀಸ್ ಅಧಿಕಾರಿಗಳೆಂದರೆ ಕೆಲವರಿಗೆ ನಂಬಿಕೆ, ಕೆಲವರಿಗೆ ಭಯ. ಅವರ ಸ್ನೇಹವಿತ್ತೆಂದರೆ ಗೌರವ ಎಂಬ ಭಾವನೆ ಇದೆ. ಹೀಗಾಗಿ ಪೊಲೀಸ್ ಅಧಿಕಾರಗಳ ಹೆಸರಿನಲ್ಲಿ ಫ್ರೆಂಡ್ಸ್‌ ರಿಕ್ವೆಸ್ಟ್ ಬಂದೊಡನೆ ಸಹಜವಾಗಿ ಸ್ವೀಕರಿಸುತ್ತಾರೆ. ಹಾಗಾಗಿ ವಂಚಕರಿಗೆ ಆನ್‌ಲೈನ್ ಟೋಪಿ ವ್ಯವಹಾರಕ್ಕೆ ಇದು ಹೆಚ್ಚು ಸುಲಭ.

ಪೊಲೀಸ್ ನಕಲಿ ಖಾತೆ: ಸೈಬರ್ ವಂಚಕರು ಪೊಲೀಸ್ ಅಧಿಕಾರಿಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪಡೆದುಕೊಂಡು, ಅವರ ಹೆಸರಿನಲ್ಲಿಯೆ ನಕಲಿ ಖಾತೆಗಳನ್ನು ಮೊದಲಿಗೆ ಸೃಷ್ಟಿ ಮಾಡುತ್ತಾರೆ. ಆನಂತರದಲ್ಲಿ ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿ, ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಳ್ಳುತ್ತಾರೆ. ಆನಂತರ ನನಗೆ ಹಣದ ಅವಶ್ಯಕತೆ ಇದೆ. ನಿಮಗೆ 2-3 ದಿನದಲ್ಲಿ ಹಣ ವಾಪಸ್ ನೀಡುವುದಾಗಿ ಹೇಳುತ್ತಾರೆ.

ಇದನ್ನು ನಂಬಿದ ಅನೇಕರು ಅವರು ನೀಡುವ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುತ್ತಾರೆ. ಹಣ ಸಂದಾಯ ಮಾಡಿದ್ದೆ ತಡ, ಅವರ ಫ್ರೆಂಡ್ಸ್‌ ಲಿಸ್ಟ್‌ ನಿಷ್ಕ್ರಿಯಗೊಳಿಸುತ್ತಾರೆ. ಆಗ ತಾವು ಮೋಸಕ್ಕೆ ಹೋಗಿರುವುದಾಗಿ ಜನರ ಅರಿವಿಗೆ ಬರುತ್ತದೆ.

ನಕಲಿ ವಿಡಿಯೋ ಕಾಲ್: ವಂಚಕರು ಕಾನೂನು ಪಾಲನಾ ಅಧಿಕಾರಿಗಳು ಎಂದು ನಕಲಿ ವಿಡಿಯೋ ಕಾಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜನಸಾಮಾನ್ಯರಿಗೆ ಪೊಲೀಸ್ ಅಧಿಕಾರಿಗಳೆಂಬ ಭಯ, ಕಾನೂನು ಬಗ್ಗೆ ಅರಿವಿಲ್ಲದಿರುವುದು ಮೊದಲಾದವುಗಳನ್ನು ಮುಂದಿಟ್ಟುಕೊಂಡು ಆನ್‌ಲೈನ್ ಮೂಲಕ ಹಣ ದೋಚಲಾಗುತ್ತಿದೆ. ಅಶ್ಲೀಲ ಸೈಟ್ ವೀಕ್ಷಿಸುವವರನ್ನು ಕ್ರೈಂ ಕಂಟ್ರೋಲ್ ಬ್ಯೂರೋ ಹೆಸರಿನಲ್ಲಿ ವಂಚನೆಗೊಳಪಡಿಸಲಾಗುತ್ತಿದೆ.

ಹೀಗೆ ಅನೇಕ ರೀತಿಯಲ್ಲಿ ಪೊಲೀಸ್ ಅಧಿಕಾರಿಗಳ ನಕಲಿ ಐಡಿ ಸೃಷ್ಟಿಸಿಕೊಂಡು ವಂಚನಾ ಜಾಲ ಹೆಣೆಯಲಾಗುತ್ತಿದೆ. ತಾನು ಉನ್ನತ ಪೊಲೀಸ್ ಅಧಿಕಾರಿ ಎಂಬುದಾಗಿ ವಂಚಕರು ನಂಬಿಸುತ್ತಾರೆ. ಆಧಾರ್ ಕಾರ್ಡ್, ಬ್ಯಾಂಕ್ ಮಾಹಿತಿಗಳನ್ನು ಬಳಸಿಕೊಳ್ಳುವ ವಂಚಕರು ಕಾನೂನುಬಾಹಿರ ವಸ್ತುಗಳನ್ನೊಳಗೊಂಡ ಕೊರಿಯರ್ ಬುಕ್ ಮಾಡಿರುವುದಾಗಿ ಹೇಳಿ ಹಣ ದೋಚುತ್ತಾರೆ. ವಂಚನೆಗೊಳಗಾದ ಅನೇಕರು ದೂರು ನೀಡಲು ಕೂಡ ಮುಂದಾಗುವುದಿಲ್ಲ.

ನನ್ನ ಹೆಸರಿನಲ್ಲಿಯೂ ಫೇಸ್‌ಬುಕ್‌ ಖಾತೆ ಸೃಷ್ಟಿಯಾಗಿತ್ತು. ಜನತೆಯೆ ಜಾಗ್ರತರಾಗಬೇಕಾದ ಅವಶ್ಯಕತೆ ಇದೆ. ಯಾರು ಕೂಡ ಆನ್‌ಲೈನ್‌ನಲ್ಲಿ ಅಪರಿಚಿತಗಳೊಂದಿಗೆ ವ್ಯಹರಿಸದೆ ಇರುವುದು ಉತ್ತಮ. ಪೊಲೀಸ್ ಅಧಿಕಾರಿಗಳು ಎಂಬ ಭಯದಿಂದ ಇಂತಹ ವಿಡಿಯೋ ಕಾಲ್ ಅಥವಾ ಸಂದೇಶ ಲಭಿಸಿದರೆ ಭಯಪಡಬೇಕಾದ ಅಗತ್ಯವಿಲ್ಲ. ಅವರು ಹೇಳುವ ಖಾತೆಗೆ ಹಣ ರವಾನಿಸಬಾರದು. ಯಾವುದೇ ತನಿಖಾ ಏಜೆನ್ಸಿ ತನಿಖೆಗಾಗಿ ಹಣ ಕಳುಹಿಸಲು ಕೇಳುವುದಿಲ್ಲ. ವಂಚನೆಗೊಳಗಾದರೆ ಒಂದು ಗಂಟೆಯೊಳಗೆ (ಗೋಲ್ಡನ್ ಅವರ್) 1930 ಎಂಬ ನಂಬರ್‌ಗೆ ಮಾಹಿತಿ ನೀಡಬಹುದು ಬೆಂಗಳೂರು ಗೋವಿಂದಪುರದ ಸಿಪಿಐ ಎಚ್. ಜಯರಾಜ್ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ಸೇವೆಯಂತಹ ಪುಣ್ಯ ಕಾರ್ಯ ಮತ್ತೊಂದಿಲ್ಲ
ಸಾಧಕ-ಬಾಧಕ ಪರಿಗಣಿಸಿ ಸುದ್ದಿ ಪ್ರಕಟಿಸುವುದು ಒಳಿತು