ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಮಂಡ್ಯ ಜಿಲ್ಲಾ ಶಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಯೂತ್ ರೆಡ್ ಕ್ರಾಸ್ ಘಟಕದಡಿ ಮೈಸೂರು ವಿಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನಗಳ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಜನರು ಕಲಿತಷ್ಟೂ ಆಧುನೀಕರಣದ ಜಗತ್ತಿನಲ್ಲಿ ಉತ್ತಮವಾಗಿ ಬದುಕಬಹುದು. ಬದುಕಿನಲ್ಲಿ ಶಿಸ್ತು, ಸಂಯಮ, ತಾಳ್ಮೆ, ಸೇವಾ ಮನೋಭಾವನೆ ಮತ್ತು ಮೌಲ್ಯಧಾರಿತ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಅನುಸರಿಸಬೇಕು ಎಂದರು.ಯುವಕರು ಇತಿಹಾಸವನ್ನು ಅರ್ಥೈಸಿಕೊಳ್ಳುವುದು ಅವಶ್ಯಕ. ಸ್ವಾತಂತ್ರ್ಯಪೂರ್ವದ ಇತಿಹಾಸ ಸಂಸ್ಕಾರವನ್ನು ಕಲಿಸಿದರೆ, ಸ್ವಾತಂತ್ರ್ಯದ ನಂತರದ ಇತಿಹಾಸ ಹೋರಾಟದ ಮಹತ್ವವನ್ನು ತಿಳಿಸುತ್ತದೆ. ಸ್ವಾತಂತ್ರ್ಯಕ್ಕಾಗಿ ಅನೇಕ ಬಲಿದಾನಗಳೇ ಭಾರತದಲ್ಲಿ ನಡೆದುಹೋಗಿದೆ. ನಮ್ಮ ದೇಶದಲ್ಲಿ ಮಾತ್ರ ಅನೇಕ ಕವಿಗಳು, ಮಹಾನ್ ನಾಯಕರು, ದಾರ್ಶನಿಕರು ಮತ್ತು ಸಂತರು ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸ್ಥಾನ ಅಲಂಕರಿಸಬೇಕು ಅದಕ್ಕಾಗಿ ನಾವು ‘ವಿಜಯೀಭವ’ ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದೇವೆ. ಇದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಿಕ್ಷಣ ನೀಡಲಾಗುವುದು. ಐಎಎಸ್ ಐಪಿಎಸ್ ನಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಯಶೋಗಾಥೆಯನ್ನು ಸ್ಪರ್ಧಾರ್ಥಿಗಳಿಗೆ ಪೂರ್ತಿ ತುಂಬಲು ಪ್ರಸಾರ ಮಾಡಲಾಗುತ್ತದೆ ಎಂದರು.
ಯೂತ್ ರೆಡ್ ಕ್ರಾಸ್ ಶಿಬಿರಗಳಲ್ಲಿ ಜೀವ ಉಳಿಸಬಹುದಾದ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳಬಹುದು, ಇದರಿಂದ ಎಷ್ಟೋ ಸಂದರ್ಭದಲ್ಲಿ ಪ್ರಾಣ ಹಾನಿಯನ್ನು ತಪ್ಪಿಸಬಹುದು. ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಕ್ಕೆ ಬಂದಿರುವ ಶಿಬಿರಾರ್ಥಿಗಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದರು.ನಂತರ ಯೂತ್ ರೆಡ್ ಕ್ರಾಸ್ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಬಸ್ರೂರು ರಾಜೀವ್ ಶೆಟ್ಟಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ ಇತರರಿದ್ದರು.