ಪೆಟ್ರೋಲ್‌, ಡೀಸೆಲ್‌ಗಾಗಿ ಮತ್ತಷ್ಟು ಕಡೆ ಪರದಾಟ

KannadaprabhaNewsNetwork |  
Published : May 25, 2026, 02:00 AM IST
ಲಕ್ಷ್ಮೇಶ್ವರ ಪೆಟ್ರೋಲ್‌ ಬಂಕ್‌ವೊಂದರಲ್ಲಿ ಡೀಸೆಲ್‌ ಖರೀದಿಗೆ ಮುಗಿಬಿದ್ದಿದ್ದ ರೈತರು. | Kannada Prabha

ಸಾರಾಂಶ

ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದ ಕೆಲವೆಡೆ ಪೆಟ್ರೋಲ್ ಮತ್ತು ಡೀಸೆಲ್‌ ಕೊರತೆ ಎದುರಾಗಿದ್ದು, ಜನರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಮಧ್ಯಪ್ರಾಚ್ಯ ಯುದ್ಧ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದ ಕೆಲವೆಡೆ ಪೆಟ್ರೋಲ್ ಮತ್ತು ಡೀಸೆಲ್‌ ಕೊರತೆ ಎದುರಾಗಿದ್ದು, ಜನರು ಪರದಾಡುವಂತಾಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಮುಂಗಾರು ಬಿತ್ತನೆಯ ತಯಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅನ್ನದಾತರು ಟ್ರ್ಯಾಕ್ಟರ್ ಮೂಲಕ ಬಿತ್ತನೆಗೆ ಮುಂದಾಗಿದ್ದು, ಟ್ರ್ಯಾಕ್ಟರ್‌ಗಾಗಿ ಪಟ್ಟಣದ ಬಂಕ್‌ನಲ್ಲಿ ಭಾನುವಾರ ಡೀಸೆಲ್ ಖರೀದಿಗೆ ಮುಗಿಬಿದ್ದಿದ್ದು ಕಂಡು ಬಂತು. ಬೇಡಿಕೆ ಹೆಚ್ಚಿದ್ದರಿಂದ ಭಾನುವಾರ ಪಟ್ಟಣದ ಐದಾರು ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಖಾಲಿಯಾಗಿತ್ತು. ಆದರೆ, ಮಾನ್ವಿ ಪೆಟ್ರೋಲ್ ಬಂಕ್‌ನಲ್ಲಿ ಮಾತ್ರ ಡೀಸೆಲ್ ಇದ್ದ ಕಾರಣ ಬಹಳಷ್ಟು ರೈತರು ಖರೀದಿಗೆ ಮುಗಿಬಿದ್ದಿದ್ದರು. ಬೆಳಗ್ಗೆಯಿಂದಲೇ ಟ್ರ್ಯಾಕ್ಟರ್ ಹಾಗೂ ಖಾಲಿ ಕ್ಯಾನ್ ಮೂಲಕ ಡೀಸೆಲ್‌ ತುಂಬಿಸಿಕೊಳ್ಳಲು ನೂರಾರು ರೈತರು ಬಂಕ್‌ಗೆ ಬಂದಿದ್ದರಿಂದ ಜನದಟ್ಟಣೆ ಉಂಟಾಯಿತು. ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ರೈತರು ಸರದಿ ಸಾಲಿನಲ್ಲಿ ನಿಂತು ಡೀಸೆಲ್ ಖರೀದಿಸಲು ವ್ಯವಸ್ಥೆ ಮಾಡಿದರು. ಪೆಟ್ರೋಲ್ ಬಂಕ್‌ನವರು ಒಂದು ಕ್ಯಾನ್‌ಗೆ ₹2 ಸಾವಿರ ಮೊತ್ತದ ಡೀಸೆಲ್ ಮಾತ್ರ ಕೊಡುತ್ತಿದ್ದರು.

ಇದೇ ವೇಳೆ, ಗದಗದ ಅತ್ಯಂತ ಜನದಟ್ಟಣೆಯ ಪ್ರಮುಖ ವೃತ್ತಗಳಲ್ಲಿರುವ ಮೂರು ಪೆಟ್ರೋಲ್ ಬಂಕ್‌ಗಳು ಬಂದ್ ಆಗಿವೆ. ನಗರದ ಮುಳಗುಂದ ನಾಕಾ, ಹಳೆಯ ಡಿಸಿ ಆಫೀಸ್ ಸರ್ಕಲ್ ಹಾಗೂ ಹೊಸ ಬಸ್ ನಿಲ್ದಾಣದ ಬಳಿ ಇರುವ ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಸಂಪೂರ್ಣ ಖಾಲಿಯಾಗಿದ್ದು, ‘ನೋ ಸ್ಟಾಕ್’ ಬೋರ್ಡ್ ಹಾಕಲಾಗಿದೆ. ಹುಬ್ಬಳ್ಳಿಯ ಮುಖ್ಯ ಡಿಪೋದಿಂದ ಗದಗಕ್ಕೆ ಬರಬೇಕಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಸ್ಟಾಕ್ ಸಕಾಲಕ್ಕೆ ತಲುಪದ ಹಿನ್ನೆಲೆಯಲ್ಲಿ ಅಭಾವ ಸೃಷ್ಟಿಯಾಗಿದೆ ಎನ್ನಲಾಗಿದೆ.

ಸವಣೂರು, ಹಾವೇರಿ, ಹಾನಗಲ್ಲ, ಶಿಗ್ಗಾಂವಿ, ರಾಣಿಬೆನ್ನೂರು ಸೇರಿ ಹಾವೇರಿ ಜಿಲ್ಲೆಯಲ್ಲಿ ನಗರ ಪ್ರದೇಶದ ಹಲವೆಡೆ ಡೀಸೆಲ್ ಸಿಗದೆ ರೈತರು ಪರದಾಡುತ್ತಿದ್ದಾರೆ. ಈ ಮಧ್ಯೆ, ಜಿಲ್ಲೆಯ ಗ್ರಾಮೀಣ ಭಾಗದ ಹೊಸರಿತ್ತಿ, ಗುತ್ತಲ ಭಾಗದ ಕೆಲವೆಡೆ ಬೈಕ್, ಕಾರುಗಳಲ್ಲಿ ಬಂದು ಪೆಟ್ರೋಲ್ ಬಂಕ್‌ಗಳ ಎದುರು ಜನರು ಕ್ಯಾನ್ ಹಿಡಿದು ಸರದಿ ಸಾಲಿನಲ್ಲಿ ನಿಂತ ದೃಶ್ಯಗಳು, ವಾಹನಗಳ ಉದ್ದನೆಯ ಸಾಲುಗಳು ಕಂಡು ಬರುತ್ತಿವೆ. ಇದೇ ವೇಳೆ, ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿಯೂ ಡೀಸೆಲ್‌, ಪೆಟ್ರೋಲ್‌ಗಾಗಿ ಗ್ರಾಹಕರು ಪರದಾಡುವಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಕೀಲರು ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸಿ: ಎಚ್‌. ಬಿಳ್ಳಪ್ಪ
ಪುಸ್ತಕ ಖರೀದಿಸಿ ಓದುವ ಹವ್ಯಾಸ ರೂಢಿಸಿಕೊಳ್ಳಿ: ಸಭಾಪತಿ ಬಸವರಾಜ ಹೊರಟ್ಟಿ