ಕನ್ನಡಪ್ರಭ ವಾರ್ತೆ ತುಮಕೂರುಕನ್ನಡ ಭಾಷೆ ಮತ್ತು ಸಂಸ್ಕೃತಿ ಪರವಾದ ಹೆಚ್ಚಿನ ಕಾರ್ಯಾಕ್ರಮಗಳನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ ಗೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದು ತುಮಕೂರು ನಗರದ ಶಾಸಕ ಜೆ.ಬಿ. ಜ್ಯೋತಿಗಣೇಶ್ ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ದತ್ತಿಪ್ರಶಸ್ತಿ ಪ್ರದಾನ ಮತ್ತು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದುಡಿದ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದರು.ಸಾವಿರದ ಐದುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಸಾಹಿತ್ಯಕ್ಕೆ ಪಂಪ, ರನ್ನರಂತಹ ಕವಿಗಳ ಜೊತೆಗೆ ಹನ್ನೆರಡನೇ ಶತಮಾನದ ಶರಣರು ಸಂತರು ದಾಸರು ಅದ್ಭುತವಾದ ಅಡಿಪಾಯ ಹಾಕಿದ್ದಾರೆ. ಆದರೆ ಇಂದು ಇಂಗ್ಲೀಷ್ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆಗೆ ಸ್ವಲ್ಪಮಟ್ಟಿಗೆ ಹಿನ್ನೆಡೆ ಆಗಿದ್ದರೂ ಕನ್ನಡ ಸಾಹಿತ್ಯ ರಚನೆ ಮಾಡುವವರ ಸಂಖ್ಯೆ ಹೆಚ್ಚಾಗಿರುವುದು ಹೆಮ್ಮೆಯ ವಿಷಯ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ ಹದಿನಾರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು 30 ಲಕ್ಷ ರು.ಗಳು ಖರ್ಚಾಗಿದ್ದು ಅದರಲ್ಲಿ ವಸ್ತುರೂಪದಲ್ಲಿ ಹದಿನೈದು ಲಕ್ಷವನ್ನು ದಾನಿಗಳು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಗೆ ಈ ಜಿಲ್ಲೆಯ ಎಲ್ಲ ಮುಖಂಡರ ಮತ್ತು ಕನ್ನಡಿಗರೆಲ್ಲರ ಸಹಕಾರದಿಂದ ಜಿಲ್ಲೆಗೆ ಮತ್ತೊಮ್ಮೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ರಾಜ್ಯ ಕಾರ್ಯಿಕಾರಿ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಲಕ್ಷ್ಮಣದಾಸ್ ಮಾತನಾಡಿ ಇಂದು ಜನರಲ್ಲಿನ ಇಂಗ್ಲೀಷ್ ವ್ಯಾಮೋಹದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನೆದುರಿಸುತ್ತಿದೆ. ಜನರು ತಮ್ಮ ಭಾಷೆಯ ಬಗ್ಗೆ ಕೀಳರಿಮೆ ಮನೋಭಾವವನ್ನು ಬಿಡಬೇಕು. ಅಭಿಮಾನವನ್ನು ಬೆಳೆಸಿಕೊಂಡು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪ್ರಯತ್ನಿಸಬೇಕು ಎಂದರು.