ನರೇಗಾ ಯೋಜನೆಯಲ್ಲಿ 1 ಲಕ್ಷಕ್ಕೂ ಅಧಿಕ ಮಾನವ ದಿನ ಸೃಜನೆ

KannadaprabhaNewsNetwork |  
Published : May 30, 2025, 12:24 AM IST
(27ಎನ್.ಆರ್.ಡಿ4 ಜಿಲ್ಲೆಯಲ್ಲಿ ಅತೀ ಹಚ್ಚು ಮಾನವ ದಿನಗಳನ್ನು ಬಳಕೆ ಮಾಡಿಕೊಂಡ ಕೂಲಿಕಾರರು.)  | Kannada Prabha

ಸಾರಾಂಶ

"ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ " (ನರೇಗಾ) ಯೋಜನೆಯ 2025-26ನೇ ಸಾಲಿನ ಕಳೆದ ಎರಡು ತಿಂಗಳಲ್ಲಿ 13 ಗ್ರಾಪಂಗಳಲ್ಲಿ 1 ಲಕ್ಷಕ್ಕೂ ಅಧಿಕ ಮಾನವ ದಿನ ಸೃಜಿಸುವ ಮೂಲಕ ನರಗುಂದ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: "ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ " (ನರೇಗಾ) ಯೋಜನೆಯ 2025-26ನೇ ಸಾಲಿನ ಕಳೆದ ಎರಡು ತಿಂಗಳಲ್ಲಿ 13 ಗ್ರಾಪಂಗಳಲ್ಲಿ 1 ಲಕ್ಷಕ್ಕೂ ಅಧಿಕ ಮಾನವ ದಿನ ಸೃಜಿಸುವ ಮೂಲಕ ನರಗುಂದ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ.

ಗ್ರಾಮೀಣ ಭಾಗದ ಜನರು ಬೇಸಿಗೆಯಲ್ಲಿ ಗುಳೆ ಹೋಗಬಾರದು ಎಂಬ ಕಾರಣಕ್ಕೆ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತದೆ. ಈ ಕಾಳಜಿಯೇ ಅತಿ ಹೆಚ್ಚು ಮಾನವ ದಿನಗಳ ಸೃಜನೆಗೆ ಕಾರಣವಾಗಿದ್ದು, ಅದು ಜಿಲ್ಲೆಯಲ್ಲಿಯೇ ನರಗುಂದವನ್ನು ಮೊದಲ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.

ಪ್ರಸಕ್ತ 2025-26ನೇ ಸಾಲಿನ ತಾಪಂ ಮತ್ತು 13 ಗ್ರಾಪಂ ಅಧಿಕಾರಿಗಳ ಸಹಯೋಗದಲ್ಲಿ 1,01,719 ಲಕ್ಷ ಮಾನವ ದಿನಗಳ ಸೃಜಿಸುವ ಮೂಲಕ ಈ ಸಾಧನೆ ಮಾಡಿದೆ. ತಾಲೂಕಿನ 13 ಗ್ರಾಪಂಗಳ ವ್ಯಾಪ್ತಿಯ ಆರ್ಥಿಕ ವರ್ಷದ ಮೊದಲ ಎರಡು ತಿಂಗಳ ಬೇಸಿಗೆ ಇರುವ ಕಾರಣ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೃಷಿ ಕೆಲಸ ಇರುವುದಿಲ್ಲ. ಈ ಕಾರಣದಿಂದ ವಲಸೆ ತಪ್ಪಿಸಲು ನರೇಗಾದಡಿ ಜಲಾನಯನ ತತ್ವದಡಿಯಲ್ಲಿ ಸಮುದಾಯ ಬದು ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಯಿತು. ಪ್ರತಿ ಹಳ್ಳಿಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಕೈಗೊಂಡಿದ್ದರಿಂದ ಈ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

ಕೂಲಿಕಾರರಗೆ ಮನವರಿಕೆ:

ಈ ತಾಲೂಕು ನೀರಾವರಿ ಪ್ರದೇಶ ಆಗಿದ್ದರಿಂದ ಇಲ್ಲಿ ಕೂಲಿಕಾರರನ್ನು ಕೆಲಸಕ್ಕೆ ಕರೆ ತರುವುದು ಅಧಿಕಾರಿಗಳಿಗೆ ದೊಡ್ಡ ಸವಾಲಿನ ಕೆಲಸ. ಕೂಲಿಕಾರರೊಂದಿಗೆ ಅಧಿಕಾರಿಗಳು ಸಭೆ ನಡೆಸಿ, ಯೋಜನೆಯ ಕುರಿತು ಮಾಹಿತಿ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಬರುವಂತೆ ಪ್ರಯತ್ನ ಮಾಡಿದ್ದಾರೆ. ಜತೆಗೆ ಜಾಬ್‌ಕಾರ್ಡ್‌ ಅಭಿಯಾನ, ಕಾರ್ಯಾಗಾರಗಳ ಮೂಲಕ ಕೂಲಿಕಾರರಿಗೆ ಮನವಿ ಮಾಡಲಾಯಿತು. ಅದಲ್ಲದೆ ಕಾಯಕ ಬಂಧುಗಳು, ಮಹಿಳಾ ಸ್ವಸಹಾಯ ಸಂಘದವರೊಂದಿಗೆ ಸಭೆ, ಗ್ರಾಪಂ ಸ್ವಚ್ಛವಾಹಿನಿ ಧ್ವನಿವರ್ಧಕದಲ್ಲಿ ಪ್ರಚಾರ ನಡೆಸಲಾಗಿದೆ.

ತಾಂತ್ರಿಕ ಸಮಸ್ಯೆ: ಏಪ್ರಿಲ್ ತಿಂಗಳಲ್ಲಿ ಕೆಲಸ ಪ್ರಾರಂಭಿಸಿದಾಗ ಕೂಲಿಕಾರರು ಈ ಬಾರಿ ಬದಲಾವಣೆಯಾದ ಎನ್.ಎಂ.ಎಂ.ಎಸ್. ಆ್ಯಪ್‌ನ ತಾಂತ್ರಿಕ ಸಮಸ್ಯೆಗಳ ನೆಪ ಒಡ್ಡಿ ಕೆಲಸಕ್ಕೆ ಬರದೆ ಇರುವ ಗ್ರಾಮಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು, ನರೇಗಾ ಸಿಬ್ಬಂದಿ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಿ, ಕೂಲಿಕಾರರ ಮನವೊಲಿಸಿ ಕೆಲಸ ಪ್ರಾರಂಭಿಸಲಾಯಿತು.

ಕೆಲವು ಗ್ರಾಪಂಗಳಲ್ಲಿ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಕೂಲಿಕಾರರರು ಕೆಲಸ ಮಾಡುವ ಸ್ಥಳದಲ್ಲಿ ಕೂಲಿಕಾರರ ಉಚಿತ ಆರೋಗ್ಯ ತಪಾಸಣೆಯನ್ನೂ ಮಾಡಲಾಗಿದೆ.

ತಾಲೂಕುವಾರು ಮಾನವ ದಿನಗಳ ಸೃಜನೆ ವಿವರ ಇಂತಿದೆ. ನರಗುಂದ - ಶೇ. 174.61, ಲಕ್ಷ್ಮೇಶ್ವರ ಶೇ. 117.61, ಗದಗ ಶೇ. 115.67, ರೋಣ ಶೇ. 92.21, ಗಜೇಂದ್ರಗಡ ಶೇ.60.45, ಶಿರಹಟ್ಟಿ ಶೇ.21.68, ಮುಂಡರಗಿ ಶೇ.18.54 ಆಗಿದೆ.

ಬೇಸಿಗೆಯ ಎರಡು ತಿಂಗಳಲ್ಲಿ 1 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿತ್ತು. ತಿಂಗಳ ಗುರಿ ಮೀರಿ ಸಾಧನೆ ಮಾಡಿದ್ದೇವೆ. ಶೇಕಡಾವಾರು ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆಯಲ್ಲಿ ತಾಲೂಕು ಪ್ರಥಮ ಸ್ಥಾನದಲ್ಲಿರುವುದು ಖುಷಿ ತಂದಿದೆ ತಾಪಂ ಸಹಾಯಕ ನಿರ್ದೇಶಕ ಸಂತೋಷಕುಮಾರ್ ಪಾಟೀಲ ಹೇಳಿದರು.

ನರೇಗಾ ಯೋಜನೆಯಡಿ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 1,01,719 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿ ತಾಪಂ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!