ಕನ್ನಡಪ್ರಭ ವಾರ್ತೆ ಶಹಾಪುರತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಪ್ರೌಢಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೀರೆ ಅಗಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಹಾಗೂ ಮಹಾಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಆತಂಕಕಾರಿ ಘಟನೆ ಶುಕ್ರವಾರ ನಡೆದಿದೆ.ಅನ್ನ ಸಾಂಬರ್ ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲವರಿಗೆ ವಾಂತಿಯಾಗಿದ್ದು, ಮತ್ತೆ ಕೆಲವರಿಗೆ ಹೊಟ್ಟೆ ನೋವು, ಇನ್ನು ಕೆಲವರಿಗೆ ತಲೆ ಸುತ್ತು ಬಂದಿದೆ ಎಂದು ಹೇಳಲಾಗಿದೆ. ಅಸ್ವಸ್ಥ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಲೇ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ. ಸುಶೀಲಾ, ಜಿಲ್ಲಾ ಪಂಚಾಯತ್ ಸಿಇಒ ಗರೀಮಾ ಪನ್ವಾರ್ ಹಾಗೂ ಎಸ್‌ಪಿ ಸಂಗೀತಾ ಸೇರಿದಂತೆ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿ ಮಕ್ಕಳ ಆರೋಗ್ಯ ವಿಚಾರಿಸಿದ್ದು, ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ.- ಊಟದಲ್ಲಿ ಬಳೆ ಚೂರು !
ಮಧ್ಯಾಹ್ನ ಊಟ ಮಾಡುವಾಗ ಕೆಲ ಮಕ್ಕಳ ಊಟದಲ್ಲಿ ಗಾಜಿನ ಬಳೆಗಳ ಚೂರುಗಳು ಬಂದಿವೆ ಎಂದು ಬಿಸಿ ಊಟ ಸೇವಿಸಿದ ಮಕ್ಕಳು ದೂರಿದ್ದಾರೆ. ಈ ಶಾಲೆಗಳಿಗೆ ಬಿಸಿಯೂಟ ಪೂರೈಸುತ್ತಿದ್ದ ಏಜೆನ್ಸಿ ವಿರುದ್ಧ ಜನಾಕ್ರೋಶ ಮೂಡಿದೆ.ಸಮುದಾಯ ಆರೋಗ್ಯ ಕೇಂದ್ರ ದೋರನಹಳ್ಳಿಯಲ್ಲಿ ದಾಖಲಾದ ಮಕ್ಕಳ ಯೋಗಕ್ಷೇಮ ವಿಚಾರಿಸಿದ ನಂತರ. ಮಾಧ್ಯಮದ ಜೊತೆ ಮಾತನಾಡಿದ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು, ದೇವರ ದಯದಿಂದ ಯಾವುದೇ ರೀತಿಯ ಹೆಚ್ಚಿನ ಅನಾಹುತ ಆಗಿಲ್ಲ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಘಟನೆ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.-ಮುಖ್ಯ ಶಿಕ್ಷಕರ ವಿರುದ್ಧ ಮಕ್ಕಳ ಆಕ್ರೋಶ :
ಮಧ್ಯಾಹ್ನ ಬಿಸಿಯೂಟ ಸೇವಿಸಿದ ಸ್ವಲ್ಪ ಸಮಯದ ನಂತರ ವಾಂತಿ, ಹೊಟ್ಟೆ ನೋವು ಹಾಗೂ ತಲೆಸುತ್ತುವಿನಿಂದ ಬಳಲಿರುವ ಕೆಲ ಮಕ್ಕಳು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಅವರು ಅದು ಏನೂ ಆಗಿಲ್ಲ ಮನೆಗೆ ಹೋಗಿ ರೆಸ್ಟ್ ಮಾಡಿರಿ ಕಡಿಮೆಯಾಗುತ್ತದೆ ಎಂದು ನಿರ್ಲಕ್ಷ್ಯ ವಹಿಸಿದ್ದಾರೆಂದು ಹೆಸರು ಹೇಳಲು ಇಚ್ಚಿಸದ ಮಕ್ಕಳು ಶಿಕ್ಷಕರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಶಿಕ್ಷಕರು ಮುಖ್ಯ ಶಿಕ್ಷಕರ ಗಮನಕ್ಕೆ ತಂದು ಸರ್ ವಿಷಯ ಗಂಭೀರ ಕಾಣಿಸುತ್ತಿದೆ ಎಂದಿದ್ದಾರೆ. ಆದರೆ ಮುಖ್ಯ ಶಿಕ್ಷಕರು ಇಲ್ಲ ರೀ ಯಾವುದೋ ಒಂದು ಮಗು ಮೈಯಲ್ಲಿ ಹುಷಾರಿಲ್ಲದೆ ಹೀಗೆ ಆಗಿರಬಹುದು. ಒಂದು ಮಗು ನೋಡಿ ಇನ್ನಿಷ್ಟು ಮಕ್ಕಳು ಆ ರೀತಿ ನಡೆದುಕೊಂಡಿದ್ದಾರೆ ಎಂದು ಹೆಸರೇ ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ತಿಳಿಸಿದ್ದಾರೆ.-ಬಿಸಿ ಊಟ ವಿತರಿಸಿದ ಎನ್‌ಜಿಒ ವಿರುದ್ಧ ಕ್ರಮಕ್ಕೆ ಒತ್ತಾಯ:
ಗ್ರಾಮೀಣ ಪ್ರದೇಶದಲ್ಲಿ ಬಡ ಕೂಲಿ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಆರ್ಥಿಕವಾಗಿ ಸದೃಢವಲ್ಲದ ಬಡವರ ಮಕ್ಕಳು ಹೆಚ್ಚಾಗಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಗುಣಮಟ್ಟವಲ್ಲದ ಅಡಿಗೆ ತಯಾರಿಸಿ ಮಕ್ಕಳ ಮಕ್ಕಳ ಜೀವದ ಜೊತೆ ಆಟವಾಡುತ್ತಿರುವ ಖಾಸಗಿ ಏನ್‌ಜಿಒ ವಿರುದ್ಧ ಕೈಗೊಂಡು. ನಮ್ಮ ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಬಿಸಿ ಊಟ ತಯಾರಿಸಬೇಕು.ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ಅವರ ಸಂಬಂಧಿಯ ಎನ್‌ಜಿಒ ಇರುವುದರಿಂದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಅನುಮಾನ ಇದೆ. ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಪಾಲಕರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪ್ರಾಮಾಣಿಕ ಅಧಿಕಾರಿಯಿಂದ ತನಿಖೆ ನಡೆಸಬೇಕು ಎಂದು ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪ್ರದೀಪ್ ಅಣಬಿಯವರು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ ಸುಶೀಲಾ ಬಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.