ಶೃಂಗೇರಿ ಕ್ಷೇತ್ರದಲ್ಲಿ 100 ಕೋಟಿಗೂ ಹೆಚ್ಚು ನಷ್ಟ

KannadaprabhaNewsNetwork |  
Published : Aug 07, 2024, 01:02 AM IST
ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಸೇತುವೆಯನ್ನು ಶಾಸಕ ಟಿ.ಡಿ.ರಾಜೇಗೌಡ ಮಂಗಳವಾರ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ಸೇತುವೆಯನ್ನು ಶಾಸಕ ಟಿ.ಡಿ.ರಾಜೇಗೌಡ ಮಂಗಳವಾರ ವೀಕ್ಷಣೆ ಮಾಡಿದರು.

ಜನತಾ ಕಾಲೋನಿ-ಚನಮಣಿ ಸಂಪರ್ಕ ಸೇತುವೆ ವಿಕ್ಷಿಸಿದ ಶಾಸಕ ಟಿ.ಡಿ.ರಾಜೇಗೌಡ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಈ ಬಾರಿ ಸುರಿದ ಭಾರೀ ಮಳೆ ಗಾಳಿಗೆ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ 100 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಮಂಗಳವಾರ ತಾಲುಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಜನತಾ ಕಾಲೋನಿ-ಚನಮಣಿ ಸಂಪರ್ಕ ಸೇತುವೆ ಹಾಗೂ ಆಲಂದೂರು ಗ್ರಾಮದ ಸಂಪರ್ಕ ಸೇತುವೆಯನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಆರೇಳು ವರ್ಷಗಳಿಂದ ಜಿಲ್ಲೆಯ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಮಾಗುಂಡಿ ಹಾಗೂ ನರಸಿಂಹರಾಜಪುರ ಭಾಗದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ತಾಲೂಕಿನ ಕಟ್ಟಿನಮನೆ ಭಾಗದಲ್ಲಿ ಮರ ಬಿದ್ದು ಸಾವನ್ನಪ್ಪಿದವರಿಗೆ ಪರಿಹಾರ ವಿತರಿಸಲಾಗಿದೆ.

ಮಳೆಯಿಂದ ಹಲವು ಸೇತುವೆಗಳು ಶಿಥಿಲಾವಸ್ಥೆಗೆ ತಲುಪಿದ್ದು, ರಸ್ತೆಗಳು ಗುಂಡಿಬಿದ್ದಿವೆ. ಹಲವು ಕಡೆ ಧರೆ ಕುಸಿತವಾಗಿದೆ. ಹಳ್ಳಗಳು ಉಕ್ಕಿಹರಿದ ಪರಿಣಾಮ ನಾಟಿ ಮಾಡಿದ್ದ ಗದ್ದೆಗಳಿಗೆ ಮಣ್ಣು ಮತ್ತು ಮರಳು ನುಗ್ಗಿ ಭತ್ತದ ಬೆಳೆ ಕೊಳೆತು ಹೋಗಿದೆ. ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಮನೆಗಳು ಕುಸಿದು ಬಿದ್ದಿವೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡರು ಅತಿಯಾದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.

ಮಳೆಯಿಂದ ಅಧಿಕೃತ ದಾಖಲೆಗಳಿರುವ ಮನೆ ಕಳೆದುಕೊಂಡವರಿಗೆ 1.20 ಲಕ್ಷ ರು. ಪರಿಹಾರವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಭಾಗಶಃ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ಹಾಗೂ ಎಂಜಿನಿಯರ್ ನಿರ್ಧರಿಸಿದ ಪರಿಹಾರದ ಮೊತ್ತವನ್ನು ವಿತರಿಸಲಾಗಿದೆ. ಅನಧಿಕೃತ ಮನೆಗಳು ಹಾನಿಯಾಗಿದ್ದರೆ 1 ಲಕ್ಷದವರೆಗೆ ಪರಿಹಾರ ವಿತರಿಸಲಾಗಿದೆ. ಮಳೆ ಕಡಿಮೆಯಾದರೂ ಮನೆಗಳ ಹಾನಿ ನಿಲ್ಲದಿರುವುದರಿಂದ ಎಷ್ಟು ಮನೆ ಹಾನಿಗೊಳಗಾಗಿವೆ? ಎಂದು ಅಧಿಕೃತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಜಿಲ್ಲೆಯ ಐದು ಜನ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಅತಿಹೆಚ್ಚು ಅನುದಾನ ನೀಡುವಂತೆ ಒತ್ತಡ ತರಲಾಗುವುದು ಎಂದರು.

ರೈತರಿಗೆ ಬೆಳೆವಿಮೆ ದೊರೆಯುವಲ್ಲಿ ಇದ್ದ ಸಮಸ್ಯೆಯನ್ನು ಬಗೆಹರಿಸಲಾಗಿದ್ದು ಬಹುತೇಕರಿಗೆ ವಿಮೆ ಬಂದಿದೆ. ನರಸಿಂಹರಾಜಪುರ ತಾಲೂಕಿನ ವ್ಯಾಪ್ತಿಯ ಕಡಹಿನಬೈಲು, ಮಡಬೂರು ಮತ್ತಿತರ ಗ್ರಾಮಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಾಕಷ್ಟು ಹಾನಿಯಾಗಿತ್ತು. ಆರಗಜ್ಞಾನೇಂದ್ರ ಅವರು ಸಹ ಭೇಟಿ ನೀಡಿ ಪರಿಶೀಲಿಸಿದ್ದರು. ಮಲೆನಾಡು ಭಾಗದಲ್ಲಿ ಮಲೆನಾಡು ಭಾಗದಲ್ಲಿ ಇದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಅತಿವೃಷ್ಟಿಯಿಂದ ಹಾನಿಗೊಳಾದ ಪ್ರದೇಶದ ಅಭಿವೃದ್ಧಿಗೆ ಬಿಡಿಕಾಸನ್ನು ನೀಡಲಿಲ್ಲ ಎಂದು ದೂರಿದರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬಿಜೆಪಿಯವರು ಟೀಕೆ ಮಾಡುವ ರಾಜಕಾರಣ ಬಿಟ್ಟು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ನಂತರ ತಾಲೂಕಿನ ಗದ್ದೆ ಮನೆಯಲ್ಲಿ ಹಾನಿಗೊಳಗಾದ ಸೇತುವೆ, ಮಡಬೂರು ಮುಖ್ಯರಸ್ತೆ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯರಾದ ಎ.ಬಿ.ಮಂಜುನಾಥ್, ಚಂದ್ರಶೇಖರ್, ವಾಣಿನರೇಂದ್ರ, ಲಿಲ್ಲಿಮ್ಯಾಥ್ಯೂ. ಮುಖಂಡರಾದ ಗೇರುಬೈಲುನಟರಾಜ್, ಈ.ಸಿ.ಜೋಯಿ, ಉಪೇಂದ್ರ, ನರೇಂದ್ರ, ಸುಂದರೇಶ್. ಸದಾಶಿವ, ಎಸ್.ಡಿ.ರಾಜೇಂದ್ರ, ಮನು, ಎಂ.ಆರ್. ರವಿಶಂಕರ್, ಎ.ಬಿ.ಪ್ರಶಾಂತ್, ನಂದೀಶ್, ಅಧಿಕಾರಿಗಳು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಲಕ್ಷ್ಮೀ ಹಣ ಸಾಲದ ಕಂತಿಗೆ ಕಡಿತ ಮಾಡಂಗಿಲ್ಲ : ಸಿಎಂ
ಪಿಯು: 600ಕ್ಕೆ 683, ಹಿಂದಿಯಲ್ಲಿ 100ಕ್ಕೆ 101 ಅಂಕ!