ಅಡಕೆ ತೋಟಕ್ಕೆಕಾಡಾನೆಗಳ ಹಿಂಡು ದಾಳಿ

KannadaprabhaNewsNetwork |  
Published : Dec 06, 2023, 01:15 AM IST
ಆನೆ ದಾಳಿ | Kannada Prabha

ಸಾರಾಂಶ

ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಅಡಕೆ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ, ನೂರಕ್ಕೂ ಹೆಚ್ಚು ಅಡಕೆ, ಬಾಳೆ, ತೆಂಗಿನ ಮರಗಳೂ ಧ್ವಂಸ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕಡಿರುದ್ಯಾವರ ಗ್ರಾಮದ ಪಣಿಕ್ಕಲ್ಲು ಎಂಬಲ್ಲಿ ಕಾಡಾನೆಗಳ ಹಿಂಡು ಅಡಕೆ ತೋಟಕ್ಕೆ ದಾಳಿ ಇಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಪಣಿಕಲ್ಲಿನ ಕೃಷಿಕ ರಾಘವೇಂದ್ರ ಪಟವರ್ಧನ್ ಅವರ ತೋಟಕ್ಕೆ ರಾತ್ರಿ 12ರ ಬಳಿಕ ಕಾಡಾನೆಗಳ ಹಿಂಡು ಪ್ರವೇಶಿಸಿದೆ. ಇದು ತಕ್ಷಣ ಮನೆಯವರ ಗಮನಕ್ಕೆ ಬಂದಿದ್ದು ಅವರು ಪರಿಸರದ ಮಂದಿಗೆ ವಿಚಾರ ತಿಳಿಸಿದ್ದಾರೆ. ಈ ವೇಳೆ ಸ್ಥಳೀಯರು ಒಟ್ಟಾಗಿ ಕಾಡಾನೆ ಹಿಂಡನ್ನು ಪಟಾಕಿ ಸಿಡಿಸಿ ತೋಟದಿಂದ ಓಡಿಸಿದ್ದಾರೆ. ಅಷ್ಟರಲ್ಲಿ ಆನೆಗಳು ಹತ್ತಕ್ಕಿಂತ ಅಧಿಕ ಅಡಕೆ ಮರಗಳನ್ನು ಮುರಿದು ಹಾಕಿವೆ. ರಾಘವೇಂದ್ರ ಪಟವರ್ಧನ್ ಅವರ ತೋಟಕ್ಕೆ ಕಳೆದ ಒಂದು ತಿಂಗಳಲ್ಲಿ ಕಾಡಾನೆಗಳು ದಾಳಿ ನಡೆಸಿರುವುದು ಇದು ಮೂರನೇ ಬಾರಿ ಆಗಿದೆ. ಈಗಾಗಲೇ ಅವರ ತೋಟದಲ್ಲಿ 100ಕ್ಕಿಂತ ಅಧಿಕ ಅಡಕೆಮರ, ಹತ್ತಾರು ತೆಂಗಿನ ಮರ, ಬಾಳೆ ಕೃಷಿ ಆನೆ ದಾಳಿಯಿಂದ ನಾಶವಾಗಿದೆ.

6ಕ್ಕಿಂತ ಅಧಿಕ ಆನೆಗಳು: ಸೋಮವಾರ ಕಂಡುಬಂದ ಹಿಂಡಿನಲ್ಲಿ 6ಕ್ಕಿಂತ ಅಧಿಕ ಕಾಡಾನೆಗಳು ಇರುವುದನ್ನು ಸ್ಥಳೀಯರು ಕಂಡಿದ್ದಾರೆ.ಆರು ಆನೆಗಳು ತೋಟದಲ್ಲಿ ಕಂಡುಬಂದಿದ್ದರೆ, ಇನ್ನೆರಡು ಆನೆಗಳು ಹಿಂಡಿನಲ್ಲಿದ್ದು ಸ್ಥಳೀಯರು ಆಗಮಿಸುವ ವೇಳೆ ಕಾಡಿನತ್ತ ಹೋಗಿರುವ ಅನುಮಾನ ಇದೆ.

ಆರು ಆನೆಗಳನ್ನು ಓಡಿಸುವ ವೇಳೆ, ಮೇಲಿನ ಅರಣ್ಯ ಪ್ರದೇಶದಿಂದಲೂ ಆನೆಗಳು ಘೀಳಿಡುವುದು ಕೇಳಿಬಂದಿದೆ. ಇತ್ತೀಚೆಗೆ ಚಾರ್ಮಾಡಿಯಲ್ಲೂ ಐದಕ್ಕಿಂತ ಅಧಿಕ ಆನೆಗಳು ತೋಟ ಒಂದರಲ್ಲಿ ಕಂಡುಬಂದಿದ್ದವು. ಇದೀಗ ಆರಕ್ಕಿಂತ ಅಧಿಕ ಆನೆಗಳಿರುವ ಹಿಂಡು ಗೋಚರಿಸಿದೆ. ಇದಲ್ಲದೆ ಮರಿಯಾನೆ ಸಹಿತ ಮೂರು ಕಾಡಾನೆಗಳು, ಎರಡಕ್ಕಿಂತ ಅಧಿಕ ಒಂಟಿ ಸಲಗಗಳು ಈ ಪರಿಸರದಲ್ಲಿ ಆಗಾಗ ತೋಟಗಳಿಗೆ ಪ್ರವೇಶಿಸಿ ಹಾನಿ ಉಂಟು ಮಾಡುತ್ತಿವೆ. ಚಾರ್ಮಾಡಿ ಕನಪಾಡಿ ಅರಣ್ಯ ಪ್ರದೇಶ ಹಾಗೂ ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ತೀರಾ ಹತ್ತಿರವಿರುವ ತಾಲೂಕಿನ ಕೆಲವು ಗ್ರಾಮಗಳಲ್ಲಿ ಎರಡು ಕಡೆಯಿಂದಲೂ ಆನೆಗಳು ಸಂಚರಿಸುತ್ತವೆ.ಈ ವ್ಯಾಪ್ತಿಯಲ್ಲಿ ನೇತ್ರಾವತಿ, ಮೃತ್ಯುಂಜಯ ನದಿಗಳು ಹರಿಯುತ್ತಿದ್ದು ನೀರು ಆಹಾರ ಅರಸಿ ಬರುವ ಆನೆಗಳು ತೋಟಗಳಿಗೂ ದಾಳಿ ಇಡುತ್ತಿವೆ.

ಸೋಮವಾರ ರಾತ್ರಿ ಚಾರ್ಮಾಡಿ ಅರಣ್ಯದ ಕಡೆಯಿಂದ ಆಗಮಿಸಿದ ಕಾಡಾನೆಗಳು ಮತ್ತೆ ಚಾರ್ಮಾಡಿ ಅರಣ್ಯದತ್ತ ಹೋಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಕಾಡಾನೆಗಳ ಸಂಚಾರ ವಿಪರೀತವಾಗಿ ಗೋಚರಿಸುತ್ತಿರುವುದು ಚಾರ್ಮಾಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಭೀತಿ ಮೂಡಿಸಿದೆ. ನ.27ರಂದು ತೋಟತ್ತಾಡಿಯಲ್ಲಿ ಬೆಳಗಿನ ಹೊತ್ತು ಸಂಚರಿಸಿದ ಒಂಟಿ ಸಲಗ ರಾತ್ರಿ ನೆರಿಯ ರಸ್ತೆಯಲ್ಲಿ ಕಾರಿನ ಮೇಲೆ ದಾಳಿ ನಡೆಸಿತ್ತು. ಎರಡು ದಿನಗಳ ಬಳಿಕ ಶಿಶಿಲಪೇಟೆಯಲ್ಲಿ ಸಂಜೆ ಹೊತ್ತು ಒಂಟಿ ಸಲಗ ಪ್ರತ್ಯಕ್ಷವಾಗಿತ್ತು. ಭಾನುವಾರ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಒಂಟಿ ಸಲಗ ಕಂಡುಬಂದಿತ್ತು. ಸೋಮವಾರ ರಾತ್ರಿ ಕಡಿರುದ್ಯಾವರದಲ್ಲಿ ಆರಕ್ಕಿಂತ ಅಧಿಕ ಕಾಡಾನೆಗಳು ಕಂಡುಬಂದಿವೆ. ಇದರಿಂದ ತಾಲೂಕಿನಲ್ಲಿ ಹಲವಾರು ಆನೆಗಳು ಇರುವುದು ಸ್ಪಷ್ಟವಾಗಿದೆ.

ಧರ್ಮಸ್ಥಳ ಗ್ರಾಮದ ಬೊಳಿಯಾರು ಪರಿಸರದಲ್ಲೂ ಕಾಡಾನೆಗಳು ಕಳೆದ ಎರಡು ಮೂರು ದಿನಗಳಿಂದ ತಿರುಗಾಟ ನಡೆಸುತ್ತಿದೆ. ಮರಿಯಾನೆ ಸಹಿತ ಮೂರು ಆನೆಗಳ ಹಿಂಡು ಇದಾಗಿದ್ದು ಬೊಳಿಯಾರಿನಲ್ಲಿ ತೋಟಗಳಿಗೆ ಇಳಿದು ಹಾನಿ ಉಂಟು ಮಾಡಿದೆ.

ಸೋಮವಾರ ರಾತ್ರಿಯ ವೇಳೆ ಆನೆಗಳು ಧರ್ಮಸ್ಥಳ ಪೆರಿಯಶಾಂತಿ ಹೆದ್ದಾರಿಯಲ್ಲಿ ನಿಂತಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ರಾತ್ರಿಯಾದರೆ ಜನರು ಮನೆಗಳಿಂದ ಹೊರಬರಲು ಭಯಪಡುತ್ತಿದ್ದಾರೆ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು