ಹರಿಹರದಲ್ಲಿ 1800ಕ್ಕೂ ಅಧಿಕ ಬಿಪಿಎಲ್ ಚೀಟಿ ರದ್ದು

KannadaprabhaNewsNetwork | Published : Nov 20, 2024 12:31 AM

ಸಾರಾಂಶ

ಒಂದು ಸುಳ್ಳನ್ನು 100 ಬಾರಿ ಹೇಳಿ, ಅದನ್ನೇ ಸತ್ಯ ಎಂದು ಬಿಂಬಿಸುವುದೇ ಕಾಂಗ್ರೆಸ್ ಸಿದ್ಧಾಂತ ಎಂದು ಶಾಸಕ ಬಿ.ಪಿ.ಹರೀಶ್ ಟೀಕಿಸಿದ್ದಾರೆ.

- ಸುಳ್ಳನ್ನು 100 ಬಾರಿ ಹೇಳಿ, ಸತ್ಯವೆಂದು ಬಿಂಬಿಸುವ ಕಾಂಗ್ರೆಸ್: ಹರೀಶ್‌ ಟೀಕೆ - - - ಕನ್ನಡಪ್ರಭ ವಾರ್ತೆ ಹರಿಹರ ಒಂದು ಸುಳ್ಳನ್ನು 100 ಬಾರಿ ಹೇಳಿ, ಅದನ್ನೇ ಸತ್ಯ ಎಂದು ಬಿಂಬಿಸುವುದೇ ಕಾಂಗ್ರೆಸ್ ಸಿದ್ಧಾಂತ ಎಂದು ಶಾಸಕ ಬಿ.ಪಿ.ಹರೀಶ್ ಟೀಕಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ 40% ಭ್ರಷ್ಟಾಚಾರ ಎಂದು ಸುಳ್ಳು ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಲೋಕಾಯುಕ್ತ ವರದಿ ಬರಸಿಡಿಲಿನಂತಾಗಿದೆ, ತಿರುಗುಬಾಣವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸಲು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುತ್ತಿರುವುದು ಸರಿಯಲ್ಲ. ಇದುವರೆಗೂ ತಾಲೂಕಿನಲ್ಲಿ 1800ಕ್ಕೂ ಅಧಿಕ ಬಿಪಿಎಲ್ ಚೀಟಿಗಳು ರದ್ದುಪಡಿಸಿರುವ ಬಗ್ಗೆ ಮಾಹಿತಿಯಿದೆ. ತಾಲೂಕಿನಲ್ಲಿ ಗುಡಿಸಿಲಿನಲ್ಲಿ ವಾಸ ಮಾಡುವ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿಯಿಲ್ಲ. ಆದರೆ ಇದೇ ಗುಡಿಸಲಿನ ಪಕ್ಕದ ಮೂರು ಅಂತಸ್ತಿನ ಮನೆ ಮಾಲೀಕನ ಹೆಸರಿನಲ್ಲಿ ಅಂತ್ಯೋದಯ ಪಡಿತರ ಚೀಟಿ ಇರೋದು ನಾನು ಗಮನಿಸಿದ್ದೇನೆ. ಈ ಲೋಪಗಳನ್ನು ಮೊದಲು ಸರಿಪಡಿಸಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.

ನ.25 ರಿಂದ ಡಿ.25ರವರೆಗೆ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಕ್ಫ್‌ ವಿವಾದ ವಿಷಯವಾಗಿ ರಾಜ್ಯಾದ್ಯಂತ ಸಂಚರಿಸಿ, ವಕ್ಫ್‌ನಿಂದ ಅನ್ಯಾಯಕ್ಕೆ ಒಳಗಾದವರಿಂದ ಮಾಹಿತಿ ಕಲೆ ಹಾಕಲಾಗುವುದು. ನೊಂದವರಿಗೆ ನ್ಯಾಯ ಸಿಗುವವರೆಗೂ ಹಾಗೂ ವಕ್ಫ್‌ ಕಾನೂನು ತಿದ್ದುಪಡಿ ಆಗುವವರೆಗೂ ವಿರಮಿಸುವುದಿಲ್ಲ. ಹೋರಾಟದ ಸಮಾರೋಪ ಸಮಾರಂಭವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಬಿಜೆಪಿ ರಾಜ್ಯ ಅಧ್ಯಕ್ಷರು ವಕ್ಫ್‌ ವಿವಾದದ ಬಗ್ಗೆ ಮೂರು ತಂಡಗಳನ್ನು ರಚಿಸಿ, ಅಧ್ಯಯನಕ್ಕೆ ಕಳಿಸುತ್ತಿದ್ದಾರೆ. ಇವರಲ್ಲಿ ನೀವು ಪಾಲ್ಗೊಳ್ಳುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಬಿ.ಪಿ. ಹರೀಶ್, ಈಗಾಗಲೇ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನ.25ಕ್ಕೆ ಹೋರಾಟ ಆರಂಭವಾಗಲಿದೆ. ಇದರಲ್ಲಿ ನಾನು ಭಾಗಿಯಾಗುತ್ತೆನೆ. ಯಾರೇ ಹೋರಾಟ ಮಾಡಿದರೂ ನಮ್ಮ ಅಭ್ಯಂತರವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರೇಮ್ ಕುಮಾರ್, ನಗರಸಭಾ ಸದಸ್ಯರಾದ ಆಟೋ ಹನುಮಂತಪ್ಪ ಅಶ್ವಿನಿ ಕೃಷ್ಣ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಇತರರು ಉಪಸ್ಥಿತರಿದ್ದರು.

- - -

-19ಎಚ್‍ಆರ್‍ಆರ್03: ಹರಿಹರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಪಿ.ಹರೀಶ್ ಮಾತನಾಡಿದರು.

Share this article