ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯ್ತಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಇ-ಸ್ವತ್ತುಗಳ ವಹಿವಾಟು ನಡೆದಿರುವುದರಿಂದ ಪ್ರತಿಯೊಂದು ಇ-ಸ್ವತ್ತುಗಳನ್ನು ಕೂಲಂಕುಷವಾಗಿ ಪರಿಶೀಲಿಸಲು ತಹಸೀಲ್ದಾರ್ ಅವರು ಪರಿಶೀಲನಾ ತಂಡವನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.ತಾಪಂ ಯೋಜನಾಧಿಕಾರಿ ಕೆ.ವೆಂಕಟರಾವ್, ತಾಪಂ ಸಹಾಯಕ ನಿರ್ದೇಶಕ ಬಿ.ವಿ.ಶ್ರೀಧರ್, ಶಿವಪುರ ಗ್ರಾಪಂ ಪಿಡಿಒ ಎಸ್.ರಾಮಕೃಷ್ಣ, ಬೇವುಕಲ್ಲು ಗ್ರಾಪಂ ಪಿಡಿಒ ಸಿ.ಎಸ್.ಪ್ರದೀಪ್, ಎಡಿಎಎಲ್‌ಆರ್ ಕಚೇರಿ ಪರ್ಯಾವೇಕ್ಷಕ ಮಹದೇವು, ಮಂಡ್ಯ ತಾಲೂಕು ಕಂದಾಯ ನಿರೀಕ್ಷಕ ಪ್ರಭು, ಗ್ರಾಮ ಆಡಳಿತಾಧಿಕಾರಿ ತೇಜಸ್, ತಗ್ಗಹಳ್ಳಿ ಗ್ರಾಪಂ ದ್ವಿತೀಯದರ್ಜೆ ಲೆಕ್ಕ ಸಹಾಯಕ ಎಸ್.ಚಂದ್ರಶೇಖರ್, ಹುಲಿವಾನ ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಎಸ್.ಜ್ಯೋತಿ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿದೆ.
ಜು.೧೧ರಂದು ತಹಸೀಲ್ದಾರ್, ಮಂಡ್ಯ ತಾಲೂಕು ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಸಾವಿರಕ್ಕೂ ಹೆಚ್ಚು ಇ-ಸ್ವತ್ತುಗಳ ವಹಿವಾಟು ನಡೆದಿರುವುದು ಕಂಡುಬಂದಿದೆ.ಉಪ ಲೋಕಾಯುಕ್ತರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳೊಂದಿಗೆ ಮೇ ೨೬ರಂದು ಮಂಡ್ಯ ಗ್ರಾಮಾಂತರ ಪಂಚಾಯ್ತಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗಿ ಹಲವಾರು ನ್ಯೂನ್ಯತೆಗಳು ಕಂಡುಬಂದು ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಾಗಿತ್ತು. ಈ ಕುರಿತು ಕೈಗೊಂಡ ಕ್ರಮದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಅದರಂತೆ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯ್ತಿಯವರು ಮಂಡ್ಯ ತಾಲೂಕಿನಲ್ಲಿ ಸರ್ಕಾರಕ್ಕೆ ಸೇರಿದ ಕಂದಾಯ ಮತ್ತು ಗೋಮಾಳ ಜಮೀನುಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆಯ ನಕ್ಷೆಯನ್ನು ಪಡೆಯದೆ ಅನ್ಯಕ್ರಾಂತವಾಗದ ಜಮೀನುಗಳನ್ನು ಖಾತೆ ಮಾಡಿರುವ ಬಗ್ಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಂಪೂರ್ಣ ಪರಿಶೀಲನೆ ಮಾಡಿ ನಿಯಮಾವಳಿ ಉಲ್ಲಂಘಿಸಿ ಖಾತೆ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸಲು ಸೂಚಿಸಲಾಗಿದೆ.ಇದರರ ಜೊತೆಗೆ ಹಿಡುವಳಿ ಜಮೀನು, ಖಾಸಗಿ ಬಡಾವಣೆಗಳಲ್ಲಿ ಅನ್ಯಕ್ರಾಂತವಾಗದ ಜಮೀನುಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಬಡಾವಣೆ ನಕ್ಷೆ ಅಥವಾ ಹಿಡುವಳಿ ಜಮೀನಿನಲ್ಲಿ ವಾಸ ಉದ್ದೇಶಕ್ಕೆ ನಕ್ಷೆ ತಯಾರಿಸಿ ನಾಗರಿಕ ಸೌಕರ್ಯ ಜಾಗವನ್ನು ಪಂಚಾಯ್ತಿಗೆ ನೋಂದಣಿ ಮಾಡಿಕೊಡದೆ ಇರುವ ಆಸ್ತಿಗಳಿಗೆ ಮಾಡಿರುವ ಖಾತೆಗಳ ಬಗ್ಗೆಯೂ ಪರಿಶೀಲನೆ ನಡೆಸಿ ಕಾನೂನು ಉಲ್ಲಂಘಿಸಿ ಖಾತೆ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡ ಸೂಕ್ತ ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದರ ಮೇರೆಗೆ ತಹಸೀಲ್ದಾರ್ ಅವರು ಪರಿಶೀಲನಾ ತಂಡವನ್ನು ರಚಿಸಿ ಕಾರ್ಯೋನ್ಮುಖರಾಗಿದ್ದಾರೆ.