ಕನ್ನಡಪ್ರಭ ವಾರ್ತೆ ಚಾಮರಾಜನಗರ
ಈ ಬಾರಿಯ ಲೋಕ್ ಅದಾಲತ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ದಾಖಲೆ ಪ್ರಮಾಣದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ. ಪ್ರಭಾವತಿ ಹೇಳಿದರು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದ ಮೇರೆಗೆ ಸರ್ವರಿಗೂ ನ್ಯಾಯ ಒದಗಿಸುವ ಪರಿಕಲ್ಪನೆಯಡಿ ಜನಸಾಮಾನ್ಯರ ಅನುಕೂಲಕ್ಕಾಗಿ, ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಲುವಾಗಿ ಜು. 12ರಂದು ಜಿಲ್ಲೆಯಾದ್ಯಂತ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಈ ಅದಾಲತ್‌ನಲ್ಲಿ ನ್ಯಾಯಾಲಯದ 3271 ಹಾಗೂ 98160 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 1,01,431 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಾಲಯದ ಪ್ರಕರಣಗಳಲ್ಲಿ ಚಾಮರಾಜನಗರ ತಾಲೂಕಿನ 435, ಯಳಂದೂರು 783, ಕೊಳ್ಳೇಗಾಲ 1678 ಹಾಗೂ ಗುಂಡ್ಲುಪೇಟೆ ತಾಲೂಕಿನ 375 ಸೇರಿದಂತೆ ಒಟ್ಟು 3271 ಮತ್ತು ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚಾಮರಾಜನರ ತಾಲೂಕಿನ 64908, ಯಳಂದೂರು 9524, ಕೊಳ್ಳೇಗಾಲ 15232 ಹಾಗೂ ಗುಂಡ್ಲುಪೇಟೆ ತಾಲೂಕಿನ 8496 ಪ್ರಕರಣಗಳು ಸೇರಿದಂತೆ ಒಟ್ಟು 1,01,431 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ದಂಡ ಹಾಗೂ ಪರಿಹಾರ ರೂಪದಲ್ಲಿ ನ್ಯಾಯಾಲಯದ ಪ್ರಕರಣಗಳಲ್ಲಿ ರು. 7,51,31,120 ರು. ಮತ್ತು ವ್ಯಾಜ್ಯಪೂರ್ವ ಪ್ರಕರಣಗಳಿಂದ 8,64,22,883 ರು. ಗಳು ಸೇರಿದಂತೆ ಒಟ್ಟು 16,15,54,003 ರು. ಗಳನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಹಿಂದಿನ ಅದಾಲತ್‌ಗಳಿಗಿಂತ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಇತ್ಯರ್ಥವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಲೋಕ್ ಅದಾಲತ್ ಯಶಸ್ಸಿಗೆ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಹಕರಿಸಿದ ವಕೀಲರು, ಕಕ್ಷಿದಾರರು, ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ, ಕಂದಾಯ, ಅಬಕಾರಿ, ತಂಬಾಕು ನಿಯಂತ್ರಣ ಘಟಕ, ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಜಿಲ್ಲಾ ನ್ಯಾಯಾಧೀಶರು ಅಭಿನಂದನೆ ತಿಳಿಸಿದರು.ನ್ಯಾಯಾಲಯದಲ್ಲಿ ದಾಖಲಾಗುವ ಮೊದಲೇ ಹೆಚ್ಚಿನ ವ್ಯಾಜ್ಯಪೂರ್ವ ಪ್ರಕರಣಗಳನ್ನು ಅದಾಲತ್ ಮೂಲಕ ಇತ್ಯರ್ಥಪಡಿಸುವುದರಿಂದ ಜನರ ಅಮೂಲ್ಯ ಸಮಯ ಉಳಿತಾಯವಾಗಿ ಪ್ರಕರಣಗಳು ಬಗೆಹರಿದು ಪಕ್ಷಕಾರರಲ್ಲಿ ಭಾಂದವ್ಯ ಉಂಟಾಗಲಿದೆ. ಇದರಿಂದ ನ್ಯಾಯಾಲಯಗಳ ಹೊರೆ ತಗ್ಗಲಿರುವುದರಿಂದ ಪ್ರಕರಣಗಳನ್ನು ರಾಜಿ, ಸಂಧಾನದ ಮೂಲಕ ಪರಿಹರಿಸಿಕೊಳ್ಳುವಂತೆ ಜನಸಾಮಾನ್ಯರಿಗೆ ಲೋಕ್ ಅದಾಲತ್ ಬಗ್ಗೆ ಪ್ರಾಧಿಕಾರದಿಂದ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಒಬ್ಬರು ರಾಜಿಯಾದರೇ ಅದು ಮತ್ತೊಬ್ಬರಿಗೂ ಸ್ಪೂರ್ತಿಯಾಗಲಿದೆ. ರಾಜಿಯಾಗಲು ಮೊದಲು ಜನರ ಮನ ಪರಿವರ್ತನೆಯಾಗಬೇಕು ಎಂದ ಜಿಲ್ಲಾ ನ್ಯಾಯಾಧೀಶರಾದ ಜಿ. ಪ್ರಭಾವತಿ ಅವರು ವಿಚ್ಛೇದನಾ ಹಂತಕ್ಕೆ ಬಂದಿದ್ದ ನಾಲ್ಕು ಜೋಡಿಗಳನ್ನು ರಾಜಿ ಮೂಲಕ ಒಂದಾಗಿಸಿರುವುದು ಈ ಅದಾಲತ್ ವಿಶೇಷವಾಗಿದೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.