ಕನಕಗಿರಿ:
ಕೂಲಿ ಅರಸಿ ಮೈಸೂರು, ಮಂಡ್ಯಕ್ಕೆ ಹೋಗಿರುವ ತಾಲೂಕಿನ ಗೌರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತಾಂಡಕ್ಕೆ ಅಧಿಕಾರಿಗಳು ಭೇಟಿ ನೀಡಿ ಮನೆ-ಮನೆಗೆ ತೆರಳಿ ಗುಳೆ ಹೋಗದಂತೆ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಶಿಕ್ಷಕರು ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗದಂತೆ ಮನವಿ ಮಾಡಿದ್ದಾರೆ.ಮುಖ್ಯಶಿಕ್ಷಕ ಅಡಿವೆಪ್ಪ, ತಾಂಡಾದ ಮನೆ-ಮನೆಗೆ ಭೇಟಿ ನೀಡಿ ಶಾಲಾ ಮಕ್ಕಳನ್ನು ದುಡಿಯುವುದಕ್ಕಾಗಿ ಕರೆದುಕೊಂಡು ಹೋಗದಂತೆ ಪಾಲಕರಿಗೆ, ಸಂಬಂಧಿಕರಿಗೆ ಮನವಿ ಮಾಡಿದರು. ಇನ್ನೂ ಕೂಲಿಕಾರರ ಮುಖ್ಯಸ್ಥರನ್ನು ಭೇಟಿ ಮಾಡಿ ಮಕ್ಕಳನ್ನು ಶಾಲೆ ಬಿಡಿಸಿ ಕರೆದುಕೊಂಡು ಹೋಗುವುದು ತಪ್ಪು. ಅವರನ್ನು ಶಾಲೆಗೆ ಕಳುಹಿಸಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಕೆಲಸದ ಭರವಸೆ:ಪಿಡಿಒ ಹನುಮಂತಪ್ಪ ತಮ್ಮ ಸಿಬ್ಬಂದಿಯೊಂದಿಗೆ ತಾಂಡಾಕ್ಕೆ ಭೇಟಿ ನೀಡಿ ಗುಳೆ ಹೋಗದಂತೆ ಮನವರಿಕೆ ಮಾಡಿದ್ದಾರೆ. ನಮೂನೆ-೬ ಭರ್ತಿ ಮಾಡಿ ಗ್ರಾಪಂಗೆ ಅರ್ಜಿ ಸಲ್ಲಿಸಿದರೆ ನರೇಗಾದಡಿ ಕೆಲಸ ನೀಡುವುದಾಗಿ ಫಲಾನುಭವಿಗಳಿಗೆ ಭರವಸೆ ನೀಡಿದ್ದಾರೆ. ಬಾಕಿ ಇರುವ ಕೂಲಿ ಹಣ ಪಾವತಿಸಲು ಕ್ರಮಕೈಗೊಳ್ಳಲಾಗಿದೆ. ವಲಸೆ ಹೋಗುವುದಕ್ಕಿಂತ ಇದ್ದೂರಲ್ಲೆ ಕೆಲಸ ಮಾಡಿ ಕೂಲಿ ಹಣ ಪಡೆದುಕೊಳ್ಳುವಂತೆ ತಾಂಡಾ ನಿವಾಸಿಗಳಿಗೆ ಮನವೊಲಿಸಿದರು.
ಪಿಡಿಒ ಮನವೊಲಿಕೆಗೆ ತಾಂಡಾ ಜನರು ಸ್ಪಂದಿಸಿದ್ದು, ಗುಳೆ ಹೋದವರನ್ನು ಬಿಟ್ಟು ತಾಂಡಾದಲ್ಲಿದ್ದ ಕೂಲಿ ಕಾರ್ಮಿಕರಿಗೆ ನಮೂನೆ-೬ರಡಿ ಕೆಲಸ ಕೊಡಿ. ಶಾಲೆ ಬಿಟ್ಟು ಹೋಗಿರುವ ಮಕ್ಕಳನ್ನು ಕರೆತಂದು ವಸತಿ ಕೇಂದ್ರ ಆರಂಭಿಸಿ ಅನುಕೂಲ ಮಾಡಿಕೊಡಬೇಕೆಂದು ತಾಂಡಾದ ಯುವಕರು ಮನವಿ ಮಾಡಿದರು.ಕನ್ನಡಪ್ರಭ ವರದಿಗೆ ಸ್ಪಂದನೆ
ಚಿಕ್ಕತಾಂಡದ ಜನ ಕೂಲಿ ಅರಸಿ ಗುಳೆ ಹೋಗಿರುವ ಕುರಿತು ಜು. ೧೩ರಂದು ಕನ್ನಡಪ್ರಭ "ಪಾವತಿಯಾಗದ ನರೇಗಾ ಕೂಲಿ-ಗುಳೆ ಹೋದ ಜನ " ಶಿರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತುಕೊಂಡಿರುವ ಮುಖ್ಯಶಿಕ್ಷಕ ಹಾಗೂ ಪಿಡಿಒ ತಾಂಡಾಕ್ಕೆ ಭೇಟಿ ನೀಡಿ ಗುಳೆ ಹೋಗದಂತೆ ಮನವಿ ಮಾಡಿದ್ದಾರೆ. ಕಾರ್ಮಿಕರು ತಮ್ಮ ಜತೆಗೆ ಕರೆದುಕೊಂಡು ಹೋಗಿರುವ ಮಕ್ಕಳನ್ನು ವಾಪಸ್ ಕಳಿಸುವಂತೆಯೂ ತಿಳಿಸಲಾಗಿದೆ.