
ಗದಗ: ಗದಗ- ಬೆಟಗೇರಿ ಅವಳಿ ನಗರದಾದ್ಯಂತ ಸೋಮವಾರ ವರುಣನ ಆರ್ಭಟ ಮುಂದುವರಿದಿದ್ದು, ಮಳೆಗಿಂತಲೂ ಹೆಚ್ಚಾಗಿ ಬೀಸಿದ ಭೀಕರ ಗಾಳಿಗೆ ಅವಳಿ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕದ ಹತ್ತಿರದ ಮುಖ್ಯ ರಸ್ತೆಯ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದ್ದರಿಂದ ಗಂಟೆಗಳ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇನ್ನು ಜೆಟಿ ಕಾಲೇಜು ಹತ್ತಿರದ ಕರಡಿ ಅಡ್ಡೆ ಪಕ್ಕದ ರಸ್ತೆಯ ಮೇಲೆಯೂ ಬೃಹತ್ ಮರ ಹಾಗೂ ವಿದ್ಯುತ್ ಕಂಬಗಳು ಒಟ್ಟಿಗೆ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ನಗರದ ಪ್ರಮುಖ ಸಂಪರ್ಕ ಕೊಂಡಿಯಾದ ಬಳ್ಳಾರಿ ಗೇಟ್ ಅಂಡರ್ ಪಾಸ್ ರೈಲ್ವೆ ಬ್ರಿಡ್ಜ್ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಅಂಡರ್ ಪಾಸ್‌ನಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಆ ಭಾಗಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಕುರಹಟ್ಟಿ ಪೇಟೆ ಹಾಗೂ ಸುತ್ತಮುತ್ತಲಿನ ಭಾಗದ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಲು ಸಾಧ್ಯವಾಗದೆ, ರಸ್ತೆಯಲ್ಲಿಯೇ ಹಲವಾರು ಗಂಟೆಗಳ ಕಾಲ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿತ್ತು. ಪ್ರಮುಖ ರಸ್ತೆಗಳೆಲ್ಲವೂ ಬಂದ್ ಆಗಿದ್ದರಿಂದ ಸಾರ್ವಜನಿಕರು ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಕತ್ತಲಲ್ಲಿ ಮುಳುಗಿದ ಅವಳಿ ನಗರಮಳೆಗಿಂತಲೂ ಹೆಚ್ಚಾಗಿ ಬೀಸಿದ ಚಂಡಮಾರುತದಂಥ ಗಾಳಿಗೆ ಗದಗ- ಬೆಟಗೇರಿ ಅವಳಿ ನಗರದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ನೆಲಸಮವಾಗಿವೆ. ಮಧ್ಯಾಹ್ನದಿಂದಲೇ ನಗರದ ಬಹುತೇಕ ವಾರ್ಡ್‌ಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ತಡರಾತ್ರಿಯಾದರೂ ವಿದ್ಯುತ್ ಮರುಸ್ಥಾಪನೆಯಾಗದ ಕಾರಣ ಸಾರ್ವಜನಿಕರು ಕತ್ತಲಲ್ಲಿ ಕಾಲ ಕಳೆಯುವಂತಾಯಿತು. ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹಾಗೂ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗುವ ಭೀತಿ ಎದುರಾಗಿದೆ.
ಸದ್ಯ ಹೆಸ್ಕಾಂ ಸಿಬ್ಬಂದಿ ಹಾಗೂ ನಗರಸಭೆ ಇಲಾಖೆಯು ಜೆಸಿಬಿ ಯಂತ್ರಗಳ ಸಹಾಯದಿಂದ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ಹಾಗೂ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು.