ಕನ್ನಡಪ್ರಭ ವಾರ್ತೆ ನಾಗಮಂಗಲ
ಸೋಮವಾರ ರಾತ್ರಿ ಗ್ರಾಮಕ್ಕೆ ಆಗಮಿಸಿದ ಏಳುಕೂಟದ ದೇವರುಗಳಿಗೆ ಗ್ರಾಮಸ್ಥರು ಧೂಪ ದೀಪದಾರತಿ ಮಾಡಿ ಮಂಗಳವಾದ್ಯ, ತಮಟೆ ಮೇಳದೊಂದಿಗೆ ಅದ್ಧೂರಿ ಸ್ವಾಗತ ಕೋರಿ ಅತ್ಯಂತ ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡರು.
ನಂತರ ಗ್ರಾಮದ ಶ್ರೀ ದೊರೆ ದೊಡ್ಡಯ್ಯಸ್ವಾಮಿ, ಶ್ರೀ ಕಾಟಣ್ಣಸ್ವಾಮಿ ಸೇರಿ ತುಪ್ಪದಮಡು ಗ್ರಾಮದ ದಳವಾಯಿ ದೊಡ್ಡಯ್ಯಸ್ವಾಮಿ, ಮುಂಗೊಂಡ ಮುಂದಲಾರತಿ ಚಿಕ್ಕಯ್ಯಸ್ವಾಮಿ, ದೊಡ್ಡಾಬಾಲ ಗ್ರಾಮದ ಮಂತ್ರಿ ಹುಚ್ಚಪ್ಪಸ್ವಾಮಿ, ಹೊಂಗನೂರಮ್ಮದೇವಿ, ಅರಕೆರೆ ಗ್ರಾಮದ ಗಾಳಿಗುಂಡ ಹುಚ್ಚಪ್ಪಸ್ವಾಮಿ ಹಾಗೂ ಜೋಡಿನೇರಲಕೆರೆ ಗ್ರಾಮದ ದೊಡ್ಡದೇವಮ್ಮ ಮತ್ತು ಚಿಕ್ಕದೇವಮ್ಮ ದೇವರುಗಳಿಗೆ ಹೂ- ಹೊಂಬಾಳೆ, ಗಂಗಾಸ್ನಾನದ ನಂತರ ವಿಶೇಷ ಪೂಜಾ ಕೈಂಕರ್ಯ ಹಾಗೂ ಉತ್ಸವಗಳು ಜರುಗಿದವು.ಜಾತ್ರಾ ಮಹೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತರಿಗೆ ಬೀರೇಶ್ವರಪುರ, ಬಳಪದ ಮಂಟಿಕೊಪ್ಪಲು, ಗದ್ದೆಭೂವನಹಳ್ಳಿ, ಮರಿಲಿಂಗನದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ದೇವರ ಒಕ್ಕಲುಗಳ ಬೀಡಿಕೆಯಿಂದ ಸೋಮವಾರ ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ತಂಬಿಟ್ಟಿನ ಆರತಿಯೊಂದಿಗೆ ಶ್ರೀ ಕಾಟಣ್ಣಸ್ವಾಮಿ ಹಾಗೂ ಏಳು ಕೂಟದ ಬೀರೇದೇವರುಗಳಿಗೆ ಪೂಜೆ ಸಲ್ಲಿಸಿ ತಮ್ಮ ಭಕ್ತಿ ಭಾವ ಸಮರ್ಪಿಸಿದರು. ತಾಲೂಕು ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಅಡುಗೆ ಸಾಮಗ್ರಿಗಳೊಂದಿಗೆ ಗ್ರಾಮಕ್ಕಾಗಮಿಸಿದ್ದ ಬೀರೇದೇವರ ಒಕ್ಕಲುಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಬೀಡಿಕೆ ಹೂಡಿ ಸಹಸ್ರಾರು ಭಕ್ತಾದಿಗಳಿಗೆ ಅವರೆಕಾಳು ಕೂಟು, ಮುದ್ದೆ, ಪಾಯಸ, ಬೂಂದಿ ಅನ್ನಸಂತರ್ಪಣೆ ಮಾಡಿದರು.
ಮಂಗಳವಾರ ಸಂಜೆ ವೀರಮಕ್ಕಳಿಂದ ಹಲ್ಲುಮರಿ ಸಿಗಿಯುವ ಕಾರ್ಯಕ್ರಮ ಜರುಗಿತು. ಬಳಿಕ ಎಲ್ಲಾ ದೇವರುಗಳಿಗೆ ಗಂಗಾಸ್ನಾನ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ಬೀಡಿಕೆಯವರು ಹಾಗೂ ಭಕ್ತಾದಿಗಳಿಂದ ಆರತಿ ಸೇವೆ ನಡೆಯಿತು.
ಸಹಸ್ರಾರು ಸಂಖ್ಯೆಯ ಭಕ್ತರ ಸುರಕ್ಷತೆ ದೃಷ್ಟಿಯಿಂದ ಡಿವೈಎಸ್‌ಪಿ ಬಿ.ಚಲುವರಾಜು, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.