ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ರಾಜ್ಯದ ಎಲ್ಲ ಇಲಾಖೆಗಳ ನೌಕರರ ಮಹಾ ಸಮ್ಮೇಳನ ಫೆ. ೨೭ರಂದು ಬೆಳಗ್ಗೆ ೧೦.೩೦ಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಮುಂಡರಗಿ ತಾಲೂಕಿನಿಂದ 300ಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದಾರೆ.
ಮುಂಡರಗಿ: ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ರಾಜ್ಯದ ಎಲ್ಲ ಇಲಾಖೆಗಳ ನೌಕರರ ಮಹಾ ಸಮ್ಮೇಳನ ಫೆ. ೨೭ರಂದು ಬೆಳಗ್ಗೆ ೧೦.೩೦ಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ಜರುಗಲಿದೆ. ಈ ಸಮ್ಮೇಳನದಲ್ಲಿ ರಾಜ್ಯದ ೩ ಲಕ್ಷಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಹೇಳಿದರು.
ಬುಧವಾರ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಕರಪತ್ರ ಬಿಡುಗಡೆಗೊಳಿಸಿ, ಅವರು ಮಾತನಾಡಿದರು. ರಾಜ್ಯದಲ್ಲಿ ೬ ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದಾರೆ. ನಮ್ಮ ಹಕ್ಕು, ನೆಮ್ಮದಿಯ ಬದುಕಿಗಾಗಿ ಎಂಬ ಬೇಡಿಕೆಯ ಸಮ್ಮೇಳನ ಇದಾಗಿದ್ದು, ಪ್ರಮುಖವಾಗಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವಂತೆ, ೭ನೇ ವೇತನ ಆಯೋಗದ ವರದಿ ಅನುಷ್ಠಾನದ ಹಕ್ಕೊತ್ತಾಯ ಮಂಡಿಸಲಾಗುವುದು. ಈಗಾಗಲೇ ಜಾರಿಯಲ್ಲಿರುವ ಸರ್ಕಾರಿ ನೌಕರರ ಆರೋಗ್ಯದ ಸಂಜೀವಿನಿ ಲೋಕಾರ್ಪಣೆ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಶಯ ನುಡಿ ಹೇಳಲಿದ್ದಾರೆ. ಅನೇಕ ಸಚಿವರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಪದಾಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯಾ. ಕೃಷ್ಣ ದೀಕ್ಷಿತ ಉಪನ್ಯಾಸ ನೀಡಲಿದ್ದು, ಆರೋಗ್ಯ ಇಲಾಖೆಯ ನಿವೃತ್ತ ನಿರ್ದೇಶಕ ಮಂಜುನಾಥ ಪಾಲ್ಗೊಳ್ಳುವರು.
ನೌಕರರಿಗೆ ಯಾವುದೇ ಪ್ರತಿನಿಧಿ ಶುಲ್ಕ ಇಲ್ಲ. ಕಾರ್ಯಕ್ರಮಕ್ಕೆ ಅಂದಾಜು ₹೫ ಕೋಟಿ ವೆಚ್ಚ ತಗುಲಲಿದೆ. ತಾಲೂಕಿನ ೩೦೦ಕ್ಕೂ ಹೆಚ್ಚು ಸರ್ಕಾರಿ ನೌಕರರು ಪಾಲ್ಗೊಳ್ಳಲಿದ್ದು, ಮುಂಡರಗಿ ಮತ್ತು ಗದಗನಿಂದ ಬೆಂಗಳೂರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆ ಸಾಂದರ್ಭಿಕ ರಜೆ ಸೌಲಭ್ಯ ನೀಡಲಾಗಿದೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.