ಕನ್ನಡಪ್ರಭ ವಾರ್ತೆ ಮಡಿಕೇರಿ
ಕನ್ನಡಪ್ರಭ ದಿನ ಪತ್ರಿಕೆ, ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ, ಇನ್ನರ್ ವೀಲ್ ಕ್ಲಬ್ ಮಡಿಕೇರಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೊಡಗು ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಮಂಗಳವಾರ ನಡೆದ ಮಡಿಕೇರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಶಾಲೆಯ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು.ಸ್ಪರ್ಧೆಯಲ್ಲಿ ಮಡಿಕೇರಿ ನಗರ ಸೇರಿದಂತೆ ದೂರದ ಕರಿಕೆ, ಮದೆನಾಡು, ಕಡಗದಾಳು ಹಾಗೂ ವಿವಿಧ ಕಡೆಯ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಶಸ್ತಿ ಗಳಿಸಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಡಿಕೇರಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ(ಪ್ರಭಾರ) ದಿನೇಶ್ ಕೆ. ಮಾತನಾಡಿ, ಮಕ್ಕಳಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ. ಪರಿಸರ ವೈವಿಧ್ಯತೆಯಲ್ಲಿ ಪ್ರತಿಯೊಂದು ಜೀವಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕಣ್ಣಿಗೆ ಕಾಣದ ಜೀವಿಯಿಂದ ಹಿಡಿದು ಬೃಹತ್ ಆಕಾರದ ಆನೆಯಂತಹ ಪ್ರಾಣಿಗಳು ಕೂಡ ಈ ಪರಿಸರದಲ್ಲಿ ಅಷ್ಟೇ ಮಹತ್ವವನ್ನು ಪಡೆಕೊಂಡಿದೆ. ಆದ್ದರಿಂದ ನಾವು ಜೀವ ವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.ವನ್ಯಜೀವಿ ಸಂಕುಲ ಉಳಿಸಲು ಮುಂದಾಗಬೇಕು:
ಮನುಷ್ಯ ಜೀವನ ನಡೆಸಬೇಕಾದರೆ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳು ಕೂಡ ಅಷ್ಟೇ ಮಹತ್ವದ್ದಾಗಿದೆ. ಆದ್ದರಿಂದ ಮಕ್ಕಳು ಅರಣ್ಯದ ಮೇಲೆ ಕಾಳಜಿ ವಹಿಸುವುದರೊಂದಿಗೆ ಮುಂದಿನ ತಲೆಮಾರಿಗೆ ಈಗ ಇರುವ ಅರಣ್ಯ ಹಾಗೂ ವನ್ಯಜೀವಿ ಸಂಕುಲವನ್ನು ಉಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ ಮಕ್ಕಳಿಗೆ ಕಲೆಗಳು ಕೇವಲ ಹವ್ಯಾಸವಲ್ಲ. ಅವು ಅವರ ವ್ಯಕ್ತಿತ್ವ ನಿರ್ಮಾಣಕ್ಕೆ, ಭಾವನಾತ್ಮಕ ಬೆಳವಣಿಗೆಗೆ ಮತ್ತು ಭವಿಷ್ಯದ ದೃಷ್ಟಿಕೋನ ರೂಪಿಸಲು ಸಹಕಾರ ಮಾಡುತ್ತದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ಪ್ರತಿಯೊಬ್ಬರು ತಮ್ಮ ಶ್ರಮವನ್ನು ಮತ್ತು ಸೃಜನಶೀಲತೆಯನ್ನು ಸ್ಪರ್ಧೆಯಲ್ಲಿ ತೋರಿಸಿದ್ದೀರಿ. ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಅಡಗಿದೆ. ಸೋಲು ಜೀವನದ ಒಂದು ಭಾಗ ಮಾತ್ರ. ಆದರೆ ನಿಮ್ಮ ಪ್ರಯತ್ನ ಸದಾ ಇರಬೇಕು ಎಂದು ಹೇಳಿದರು.
ಉತ್ತಮ ಪ್ರಜೆಯಾಗಿ ರೂಪಿಸಲು ಸಹಕಾರಿ:ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ರವೀಂದ್ರ ರೈ ಮಾತನಾಡಿ ಚಿತ್ರಕಲಾ ಸ್ಪರ್ಧೆಯ ಮೂಲಕ ಕನ್ನಡಪ್ರಭ ಪತ್ರಿಕೆ ಮಕ್ಕಳಲ್ಲಿ ಅರಣ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸಂತಸದ ವಿಷಯ. ಕಡಿಮೆ ಅವಧಿಯಲ್ಲಿ ಹೆಚ್ಚು ಮಕ್ಕಳನ್ನು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಪ್ರತಿಭೆ ಹೊರ ತರುವುದರೊಂದಿಗೆ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪಿಸಲು ಸಹಕಾರಿ ಎಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ ಮಾತನಾಡಿ ವಿವಿಧ ಶಾಲೆಗಳ ಹಲವು ಮಕ್ಕಳನ್ನು ಸೇರಿಸಿ ಇಷ್ಟು ದೊಡ್ಡ ಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಉತ್ತಮ ಕಾರ್ಯ ಎಂದರು.ಮಡಿಕೇರಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಲಲಿತಾ ರಾಘವನ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಯದರ್ಶಿ ಎಂ. ಧನಂಜಯ್, ಮಡಿಕೇರಿ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ನಮಿತಾ ಆರ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು ಪ್ರಾಸ್ತಾವಿಕ ಮಾತನಾಡಿದರು. ಕನ್ನಡಪ್ರಭ ಮಡಿಕೇರಿ ವರದಿಗಾರ ಮೋಹನ್ ರಾಜ್, ಸುಂಟಿಕೊಪ್ಪ ವರದಿಗಾರ ವಿನ್ಸೆಂಟ್, ನಾಪೋಕ್ಲು ವರದಿಗಾರ ದುಗ್ಗಳ ಸದಾನಂದ ಈ ಸಂದರ್ಭ ಪಾಲ್ಗೊಂಡಿದ್ದರು. ಚಿತ್ರಕಲಾ ಸ್ಪರ್ಧಾ ಪ್ರಶಸ್ತಿ ವಿಜೇತರು4ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕರಿಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಜೆ. ನಿಶ್ಮಿತಾ(ಪ್ರ),
ಮಡಿಕೇರಿ ಸಂತ ಮೈಕಲರ ಕನ್ನಡ ಮಾಧ್ಯಮ ಶಾಲೆಯ ಆರಾಧನ ಎಸ್ .ಬಿ(ದ್ವಿ), ಮಡಿಕೇರಿ ಸಂತ ಮೈಕಲರ ಇಂಗ್ಲೀಷ್ ಮಾಧ್ಯಮ ಶಾಲೆಯ ಫೃಥ್ವಿ ವಿ ಜಿ(ತೃ), ಮದೆನಾಡು ಬಿ.ಜಿ.ಎಸ್. ಪಬ್ಲಿಕ್ ಶಾಲೆಯ ಗಾನವಿ ಬಿ.ಸಿ ಹಾಗೂ ಮಡಿಕೇರಿ ಸಂತ ಮೈಕಲರ ಇಂಗ್ಲೀಷ್ ಮಾಧ್ಯಮ ಶಾಲೆಯ ಎಂ.ಕೆ. ಹರ್ಷಿಣಿ ಸಮಾಧಾನಕರ ಬಹುಮಾನ ಪಡೆದುಕೊಂಡರು.6ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಮಡಿಕೇರಿ ಕೊಡಗು ವಿದ್ಯಾಲಯದ ಪಿ.ಎಂ. ಮನ್ವಿತಾ(ಪ್ರ), ಮಡಿಕೇರಿ ಬ್ಲಾಸಂ ಶಾಲೆಯ ಹಿಬಾ ಫಾತಿಮ(ದ್ವಿ), ಬ್ಲಾಸಂ ಶಾಲೆಯ ಸಾನ್ವಿ ಎಸ್ ಪಿ(ತೃ), ಮಡಿಕೇರಿ ಸಂತ ಮೈಕಲರ ಕನ್ನಡ ಮಾಧ್ಯಮ ಶಾಲೆಯ ಸೂರಜ್ ಎಂ ಎಸ್ ಹಾಗೂ ತನೂಶ್ ಎನ್ ಎಲ್ ಸಮಾಧಾನಕರ ಬಹುಮಾನ ಗಳಿಸಿದರು.
8ರಿಂದ 10ನೇ ತರಗತಿ ವರೆಗೆ ನಡೆದ ಸ್ಪರ್ಧೆಯಲ್ಲಿ ಮಡಿಕೇರಿ ಸಂತ ಜೋಸೆಫರ ಶಾಲೆಯ ಬಿ ಎಸ್ ನಿಶಾನ್(ಪ್ರ), ಮಡಿಕೇರಿ ಸಂತ ಜೋಸೆಫರ ಶಾಲೆಯ ಎ.ಎಲ್. ಕೃಪಾ(ದ್ವಿ), ಮಡಿಕೇರಿ ಸಂತ ಮೈಕಲರ ಶಾಲೆಯ ಸಮಂತ್ ಜೆ(ತೃ), ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಹರ್ಷಿತಾ ಬಿ.ಎಸ್ ಹಾಗೂ ಮಡಿಕೇರಿ ಸಂತ ಮೈಕಲರ ಪ್ರೌಢ ಶಾಲೆಯ ರಿತನ್ ಎಂ ಎಂ ಸಮಾಧಾನಕರ ಬಹುಮಾನ ಗಳಿಸಿದರು.