ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀಸಿದ್ಧಾರೂಢ ಮಠಕ್ಕೆ ಶಿವರಾತ್ರಿ ದಿನವಾದ ಶುಕ್ರವಾರ 4 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದರು. ಬೆಳಗಿನ ಜಾವ 4ರಿಂದ ಪ್ರಾರಂಭವಾದ ಉಭಯ ಶ್ರೀಗಳ ದರ್ಶನಾಶೀರ್ವಾದ ಶನಿವಾರ ಬೆಳಗ್ಗೆ ವರೆಗೂ ಮುಂದುವರಿದಿತ್ತು. ತಾಸುಗಟ್ಟಲೇ ನಿಂತು ದರ್ಶನ ಪಡೆದರು. ಈ ನಡುವೆ ಶನಿವಾರ ಶಿವರಾತ್ರಿ ಮಹೋತ್ಸವದ ಜಾತ್ರೆ ಕೂಡ ಅದ್ಧೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತಗಣ ಆಗಮಿಸಿದೆ.
ಸಾಮೂಹಿಕ ಶಿವ ನಮಸ್ಕಾರ:ಮಠದ ಆವರಣದಲ್ಲಿ ಯೋಗಸ್ಪರ್ಶ ಪ್ರತಿಷ್ಠಾನ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಸಾಮೂಹಿಕ ಶಿವ ನಮಸ್ಕಾರ ಕಾರ್ಯಕ್ರಮ ನೆರವೇರಿತು. ಯೋಗ ಸಮಿತಿಯ ಸದಸ್ಯರು, ಯೋಗ ಶಿಕ್ಷಕರು, ಯೋಗಾಸಕ್ತರು, ಮಕ್ಕಳು ಹಾಗೂ ಸಾರ್ವಜನಿಕರು ಸಾಮೂಹಿಕ ಶಿವ ನಮಸ್ಕಾರದಲ್ಲಿ ಭಾಗವಹಿಸಿದ್ದರು.
ಸುಡುಬಿಸಿಲನ್ನು ಲೆಕ್ಕಿಸದೆ ಜಿಲ್ಲೆ, ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಮಠಕ್ಕೆ ಪಾದಯಾತ್ರೆ ಮೂಲಕ ಆಗಮಿಸಿ ಅಜ್ಜನ ದರ್ಶನ ಪಡೆದರು.ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಸಾದ
ಇಂದು ಜಾತ್ರೆ: ಮಾ. 9ರಂದು ಸಂಜೆ ಸಿದ್ಧಾರೂಢ ಅಜ್ಜನ ಮಹಾರಥೋತ್ಸವ ನಡೆಯಲಿದೆ. ಶಕ್ತಿ ಯೋಜನೆಯಿಂದ ಈ ಸಲ ಮಠಕ್ಕೆ ಬಂದಿರುವ ಭಕ್ತಗಣದ ಸಂಖ್ಯೆ ಜಾಸ್ತಿಯಾಗಿದೆ. ಜಾತ್ರೆಯಲ್ಲಿ ಸರಿಸುಮಾರು 5 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಇದಕ್ಕಾಗಿ ಬೇಕಾದ ತಯಾರಿಯನ್ನು ಮಠದ ವತಿಯಿಂದ ಮಾಡಿಕೊಳ್ಳಲಾಗಿದೆ. ಸ್ವಯಂ ಸೇವಕರಿಗೆ ಇದೇ ಮೊದಲ ಬಾರಿಗೆ ಸೇವಾ ಕಾರ್ಡ್ ಕೂಡ ವಿತರಿಸಲಾಗಿದ್ದು, ಜಾತ್ರೆಯ ನಿರ್ವಹಣೆ ಅಚ್ಚುಕಟ್ಟಾಗಿ ನಡೆಯುತ್ತಿದೆ.
ಉಚಿತ ಆಟೋ ಸೇವೆ: ಮಹಾಶಿವರಾತ್ರಿ ಹಾಗೂ ಜಾತ್ರೆಯ ಹಿನ್ನೆಲೆಯಲ್ಲಿ ನಗರದಲ್ಲಿ ನೂರಾರು ಆಟೋಗಳು ಉಚಿತ ಸೇವೆ ನೀಡುತ್ತಿವೆ. ಶುಕ್ರವಾರ ಬೆಳಗ್ಗೆಯಿಂದಲೇ ರೈಲ್ವೆ ನಿಲ್ದಾಣ ಹಾಗೂ ಹಳೇಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದಿಂದ ಸಿದ್ಧಾರೂಢ ಮಠದವರೆಗೆ ಭಕ್ತರನ್ನು ಕೊಂಡೊಯ್ಯುವ ಮೂಲಕ ಆಟೋ ಚಾಲಕರು ಭಕ್ತಿ ಮೆರೆದರು. ಈ ಸೇವೆಯೂ ಜಾತ್ರೆ ದಿನ ಕೂಡ ಮುಂದುವರಿಯಲಿದೆ.