ಹೊನ್ನಾಳಿ: ಪ್ರಸ್ತುತ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಚುನಾವಣಾ ಕಾರ್ಯಾಲಯವನ್ನು ಏ.11 ಗುರುವಾರ ಬೆಳಗ್ಗೆ 11 ಗಂಟೆಗೆ ಹೊನ್ನಾಳಿ ಪಟ್ಟಣದ ಹೊನ್ನಾಳಿ-ಶಿವಮೊಗ್ಗ ಮುಖ್ಯ ರಸ್ತೆಯ ಪಕ್ಕದ ಕಟ್ಟಡದಲ್ಲಿ ಆರಂಭಿಸಲಾಗುವುದು ಎಂದು ಪಕ್ಷದ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ತಿಳಿಸಿದರು.
ಕಾರ್ಯಾಲಯದ ಉದ್ಘಾಟನೆಗಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದ ಜಿ.ಎಂ.ಸಿದ್ದೇಶ್ವರ, ಚುನಾವಣಾ ಉಸ್ತುವಾರಿ ಎಸ್.ಎ.ರವೀಂದ್ರನಾಥ, ಜಿಲ್ಲಾಧ್ಯಕ್ಷ ರಾಜಶೇಖರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಏ.11 ಗುರುವಾರ ಪಕ್ಷದ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟನೆ ಬಳಿಕ ಕಟ್ಟಡ ಪಕ್ಕದ ಅವರಣದಲ್ಲಿ ತಾಲೂಕುಗಳ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಕೂಡ ಕರೆಯಲಾಗಿದೆ.400ಕ್ಕೂ ಹೆಚ್ಚಿನ ಸ್ಥಾನ ನಿಶ್ಚಿತವಾಗಿ ಬೆಜಿಪಿ ಗೆಲ್ಲಲಿದೆ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಹಾಗೂ ಚುನಾವಣಾ ತಾಲೂಕು ಸಂಚಾಲಕ ಎಂ.ಪಿ.ರೇಣುಕಾಚಾರ್ಯ ಅವರು ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಸುಮಾರು 400ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಿ ಮೋದಿ ಅವರು 3ನೇ ಬಾರಿಗೆ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಎಂದೂ ಭಿನ್ನಾಭಿಪ್ರಾಯಗಳಿರಲಿಲ್ಲ ಆದರೆ ಪಕ್ಷದ ಮುಖಂಡರ ನಡುವೆ ಅಭಿಪ್ರಾಯಗಳು ಬೇರೆ ಬೇರೆಯಾಗಿರುವುದು ಸಹಜ. ಚುನಾವಣೆ ಅಂತ ಸಂದರ್ಭದಲ್ಲಿ ಎಲ್ಲಾ ಅಭಿಪ್ರಾಯಗಳ ವ್ಯತ್ಯಾಸಗಳನ್ನು ಮರೆತು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳ ಆಂತರದಿಂದ ಗೆಲ್ಲಿಸುವುದೇ ಬಹುಮುಖ್ಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.