ಬಿರುಗಾಳಿ ಸಹಿತ ಮಳೆಗೆ ಕೂಡ್ಲಿಗಿಯಲ್ಲಿ 45ಕ್ಕೂ ಅಧಿಕ ವೀಳ್ಯದೆಲೆ ತೋಟಗಳಿಗೆ ಹಾನಿ

KannadaprabhaNewsNetwork |  
Published : May 22, 2024, 12:46 AM IST
ಕೂಡ್ಲಿಗಿ ತಾಲೂಕು  ಯಂಬಳಿ, ಆಲೂರು ಗ್ರಾಮಗಳ ನಡುವಿನ  ಸಂಪರ್ಲಿಸುವ ಡಾಂಬರು ರಸ್ತೆ ಮಳೆನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದು. | Kannada Prabha

ಸಾರಾಂಶ

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ, ಗುಡೇಕೋಟೆ ಹೋಬಳಿಯಾದ್ಯಂತ ಸೋಮವಾರ ತಡರಾತ್ರಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದ್ದು, 45ಕ್ಕೂ ಅಧಿಕ ವೀಳ್ಯದೆಲೆ ತೋಟಗಳಿಗೆ ಹಾನಿಯಾಗಿದೆ. ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮತ್ತು ರಸ್ತೆ ಬದಿ ಮರಗಳು ಮುರಿದು ಬಿದ್ದಿವೆ. ರಸ್ತೆ ಕೊಚ್ಚಿ ಹೋಗಿದೆ.

ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿ, ಗುಡೇಕೋಟೆ ಹೋಬಳಿಯಾದ್ಯಂತ ಸೋಮವಾರ ತಡರಾತ್ರಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದ್ದು, 45ಕ್ಕೂ ಅಧಿಕ ವೀಳ್ಯದೆಲೆ ತೋಟಗಳಿಗೆ ಹಾನಿಯಾಗಿದೆ. ಈ ಭಾಗದ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮತ್ತು ರಸ್ತೆ ಬದಿ ಮರಗಳು ಮುರಿದು ಬಿದ್ದಿವೆ. ಅಲ್ಲದೆ, ರಸ್ತೆ ಕೊಚ್ಚಿ ಹೋಗಿ ಸಂಚಾರಕ್ಕೆ ಅಡಚಣೆಯಾಗಿದ್ದು, ಮಾತ್ರವಲ್ಲ ಎರಡು ಹೋಬಳಿ ವ್ಯಾಪ್ತಿಯ 6 ಮನೆಗಳು ಜಖಂ ಆಗಿರುವ ಘಟನೆ ನಡೆದಿದೆ.

ಕೂಡ್ಲಿಗಿ ಸೇರಿದಂತೆ ಗುಡೇಕೋಟೆ, ಕಾನಹೊಸಹಳ್ಳಿ ಹೋಬಳಿಯ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಗುಡುಗು ಸಿಡಿಲಿನ ಆಬ್ಬರದೊಂದಿಗೆ ಬಿರುಗಾಳಿ ಸಹಿತ ಮಳೆಯಾಗಿದೆ. ಕಳೆದ ಮೂರು ದಿನಗಳಿಂದ ಮಳೆಯಾಗಿ ಭೂಮಿ ತಂಪಾಗಿರುವ ಕಾರಣ ಸೋಮವಾರ ಬಿರುಗಾಳಿ ಮಳೆಗೆ ಕುರಿಹಟ್ಟಿ ಗ್ರಾಮದಲ್ಲಿ 30, ಹೊಸಹಟ್ಟಿಯಲ್ಲಿ 5, ಮ್ಯಾಸರಹಟ್ಟಿಯಲ್ಲಿ 3, ಕಂಚೋಬನಹಳ್ಳಿಯಲ್ಲಿ 3, ಓಬಳಶೆಟ್ಟಿಹಳ್ಳಿಯಲ್ಲಿ 4 ತೋಟಗಳು ಸೇರಿ ಒಟ್ಟು 45 ವೀಳ್ಯದೆಲೆ ಬಳ್ಳಿಗಳು ನೆಲಕ್ಕುರುಳಿದ್ದು, ಲಕ್ಷಾಂತರ ನಷ್ಟ ಸಂಭವಿಸಿದೆ. ತೋಟವನ್ನು ಮೊದಲಿನಂತೆ ಅಭಿವೃದ್ಧಿ ಮಾಡಿ ಬೆಳೆ ಬರಲು ಕನಿಷ್ಠ ಒಂದು ವರ್ಷ ಸಮಯ ಬೇಕು. ಹೀಗಾಗಿ, ರೈತರು ಈಗ ನೆಲ ನೋಡುವಂತಾಗಿದೆ. ಹುರುಳಿಹಾಳ್ ಗ್ರಾಮದಲ್ಲಿ 4 ಪಪ್ಪಾಯಿ ತೋಟ ಮತ್ತು 30 ತೆಂಗಿನ ಮರಗಳು, 20 ಅಡಕೆ ಮರಗಳು ಧರೆಗುರುಳಿವೆ. ಅಲ್ಲದೆ, ಬೆಳಗಟ್ಟೆ, ಹುರುಳಿಹಾಳ್ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಹುಲಿಕೆರೆ ಮತ್ತು ಕಾನಹೊಸಹಳ್ಳಿ ಗ್ರಾಮದ ಕೆರೆಗಳಿಗೆ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ.

ಸಂಚಾರ ವ್ಯತ್ಯಯ: ಬಿರುಗಾಳಿ ಮಳೆಗೆ ಯಂಬಳಿ ವಡ್ಡರಹಟ್ಟಿ ಮತ್ತು ಕೆಂಚಮಲ್ಲನಹಳ್ಳಿ ಗ್ರಾಮದ ಸಂರ್ಪಕ ರಸ್ತೆ ಹಾಗೂ ಯಂಬಳಿ, ಅಲೂರು ನಡುವೆ ಸಂಪರ್ಕಿಸುವ ಡಾಂಬರು ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಎರಡು ಗ್ರಾಮಗಳ ನಡುವೆ ಸಂಚಾರ ಬಂದ್ ಆಗಿದೆ. ಅಲ್ಲದೆ, ಚಿಕ್ಕಜೋಗಿಹಳ್ಳಿಯಿಂದ ಹುರುಳಿಹಾಳ್‌ಗೆ ಹೋಗುವ ರಸ್ತೆ ಬದಿಯಲ್ಲಿ ಇದ್ದ ಮರಗಳು ಗುಂಡುಮುಣುಗು ಮತ್ತು ಹುರುಳಿಹಾಳ್ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಮದ್ಯಾಹ್ನದವರಿಗೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.

ಗೋಶಾಲೆ ನೀರು: ಗಂಡಬೊಮ್ಮನಹಳ್ಳಿ ಗೋಶಾಲೆಗೆ ಮಳೆ ನೀರು ನುಗ್ಗಿ ಕೆಸರುಗದ್ದೆಯಂತೆ ಆದ ಪರಿಣಾಮ ಜಾನುವಾರುಗಳನ್ನು ಬಯಲಲ್ಲಿ ಕಟ್ಟಿ ಮೇವು ಹಾಕಲಾಯಿತು. ಅಲ್ಲದೆ ಮೇವು ಸಂಗ್ರಹದ ಸ್ಥಳಕ್ಕೆ ನೀರು ನುಗ್ಗಿದೆ.

ಗುಡೇಕೋಟೆ, ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟು 6 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸೋಮವಾರ ರಾತ್ರಿ ಕಾನಹೊಸಹಳ್ಳಿಯಲ್ಲಿ ೫೬.೨ ಮಿಮೀ, ಗುಡೇಕೋಟೆ ೪೮.೩ ಮಿಮೀ, ಚಿಕ್ಕಜೋಗಿಹಳ್ಳಿ ೨೬.೨ ಮಿಮೀ, ಬಣವಿಕಲ್ಲು ೩೨.೪ ಮಿಮೀ ಮಳೆಯಾಗಿರುವ ಬಗ್ಗೆ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ