ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬನ್ನೂರು ರಸ್ತೆಯ ಪೊಲೀಸ್ ಕಾವಾಯಿತು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸುಮಾರು 4,600ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದರು.
ಮೃತ ಪಟ್ಟವ್ಯಕ್ತಿಯ ವಾರಸುದಾರರು, ವಾರಸು ನೆಲೆಯಲ್ಲಿ ಹಕ್ಕು ಬದಲಾವಣೆಗಾಗಿ ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದಾಗಿ ಪೌತಿ ಖಾತಾ ಆಂದೋಲನ ಹಮ್ಮಿಕೊಂಡು ಕಳೆದ 6 ತಿಂಗಳಲ್ಲಿ ಒಟ್ಟು 150ಕ್ಕೂ ಹೆಚ್ಚು ಪೌತಿ ಖಾತೆ ಆಂದೋಲನ ನಡೆಸಿ 7 ಸಾವಿರಕ್ಕೂ ಹೆಚ್ಚು ಪೌತಿ ಖಾತೆ ಮಾಡಲಾಗಿದೆ ಎಂದರು.ಕಳೆದ 6 ತಿಂಗಳಿಂದ 12 ಸಾವಿರಕ್ಕೂ ಹೆಚ್ಚು ಆರ್.ಟಿ.ಸಿ ತಿದ್ದುಪಡಿ, ಕಂದಾಯ ದಾಖಲೆ ಸಂರಕ್ಷಿಸುವ ದೃಷ್ಟಿಯಿಂದ ಕಂದಾಯ ಭೂ ದಾಖಲೆಗಳ ಆಧುನೀಕರಣಕ್ಕಾಗಿ ಪೈಲಟ್ ಆಧಾರದಲ್ಲಿ ಪಾಂಡವಪುರ ತಾಲೂಕಿನಲ್ಲಿ 35 ಲಕ್ಷ ರು. ವೆಚ್ಚದಲ್ಲಿ ಭೂ ದಾಖಲೆಗಳ ಗಣಕೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಉಳಿದ ತಾಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಜಿಲ್ಲೆಯ 233 ಗ್ರಾಪಂಗಳಲ್ಲಿ ಇ-ಸ್ವತ್ತು ಅಭಿಯಾನ ಕೈಗೊಳ್ಳಲಾಗಿದೆ. ಮನೆ ಮತ್ತು ನಿವೇಶನದ ಮಾಲೀಕರಿಗೆ ಇ-ಸ್ವತ್ತು ತಂತ್ರಾಂಶದಲ್ಲಿ 8,663 ಇ-ಸ್ವತ್ತು ದಾಖಲೆಗಳನ್ನು ವಿಶೇಷ ಆಂದೋಲನದ ಮೂಲಕ ನೀಡಲಾಗಿದೆ ಎಂದರು.
ಜಿಲ್ಲೆಯ ಐತಿಹಾಸಿಕ 151 ಸ್ಮಾರಕಗಳನ್ನು ಸಂರಕ್ಷಿಸಲಾಗಿದೆ. ವಿ.ಸಿ.ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-1 ಕಾಮಗಾರಿಯನ್ನು ಅಂದಾಜು ಮೊತ್ತ 360 ಕೋಟಿ ರು.ಗಳಲ್ಲಿ ತೆಗೆದುಕೊಳ್ಳಲಾಗಿದೆ. ಮುಖ್ಯ ನಾಲೆಯ ಸರಪಳಿಯಿಂದ 46.25 ಕಿ.ಮೀ.ವರೆಗೆ ಆಧುನೀಕರಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಕೆಮ್ಮಣ್ಣುನಾಲೆ, ತುರಗನೂರು ನಾಲೆ, ಹೆಬ್ಬಕವಾಡಿ ಮತ್ತು ಸಂಪರ್ಕ ನಾಲೆಗಳ ಆಧುನೀಕರಣ ಕಾಮಗಾರಿಗಳನ್ನು 375 ಕೋಟಿ ರು.ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಉದ್ದೇಶಿಸಲಾಗಿರುತ್ತದೆ ಎಂದರು.
ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಪ್ರತಿಷ್ಟಾನ ರಚನೆ, ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಮಂಡ್ಯ ನಗರದ ಕಲಾಮಂದಿರ ನವೀಕರಣ ಸಂಬಂಧ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ಧ್ವಜಾರೋಹಣ ಸಂದೇಶದಲ್ಲಿ ತಿಳಿಸಿದರು.