ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ ₹50 ಕೋಟಿಗೂ ಅಧಿಕ ಅವ್ಯವಹಾರ

KannadaprabhaNewsNetwork |  
Published : May 25, 2024, 12:47 AM ISTUpdated : May 25, 2024, 09:34 AM IST
 ಕಾರವಾರ ಅರ್ಬನ್ ಬ್ಯಾಂಕ್‌ನ ಆಡಳಿತ ಮಂಡಳಿಯಿಂದ ಸುದ್ದಿಗೋಷ್ಠಿ ನಡೆಯಿತು.  | Kannada Prabha

ಸಾರಾಂಶ

ಆಡಳಿತ ಮಂಡಳಿಯು ಬ್ಯಾಂಕಿನ ಅವ್ಯವಹಾರಕ್ಕೆ ಕಾರಣವೆಂದು ಮೃತ ಅಧಿಕಾರಿಯೋರ್ವರ ಮೇಲೆ ಆರೋಪ ಹೊರಿಸಿದ್ದು, ಅವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.

ಕಾರವಾರ: ಶತಮಾನಗಳ ಇತಿಹಾಸವಿದ್ದ ಇಲ್ಲಿನ ದಿ ಕಾರವಾರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್‌ನಲ್ಲಿ ಅಂದಾಜು ₹೫೦ ಕೋಟಿಗೂ ಅಧಿಕ ಅವ್ಯವಹಾರವಾಗಿದ್ದು, ಬ್ಯಾಂಕ್ ಮುಚ್ಚುವ ಹಂತಕ್ಕೆ ಬಂದಿದ್ದು, ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ. 1912 ರಲ್ಲಿ ಈ ಬ್ಯಾಂಕ್ ಸ್ಥಾಪನೆಯಗಿದ್ದು, 112  ವರ್ಷಗಳು ಸಂದಿವೆ. ಪ್ರಾಥಮಿಕ ಮಾಹಿತಿಯಲ್ಲಿ ಕಳೆದ 2014 ರಿಂದಲೂ ಬ್ಯಾಂಕ್‌ನಲ್ಲಿ ಅವ್ಯವಹಾರ ಆಗುತ್ತ ಬಂದಿರುವುದು ತಿಳಿದುಬಂದಿದೆ. 

ಆದರೆ, ಆಡಳಿತ ಮಂಡಳಿಯ ಗಮನಕ್ಕೆ ಮಾತ್ರ ಬಾರದಿರುವುದು ವಿಪರ್ಯಾಸವಾಗಿದೆ. ೫ ಸಾವಿರ ಗ್ರಾಹಕರನ್ನು ಹೊಂದಿದ್ದು, ಠೇವಣಿ ಇಟ್ಟ ಹಣವನ್ನು ವಾಪಸ್ ನೀಡುವುದಾಗಿ ಆಡಳಿತ ಮಂಡಳಿ ಹೇಳಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದು ಗ್ರಾಹಕರಲ್ಲಿ ಉದ್ಭವಿಸಿದ ಪ್ರಶ್ನೆಯಾಗಿದೆ.

ಆಡಳಿತ ಮಂಡಳಿಯು ಬ್ಯಾಂಕಿನ ಅವ್ಯವಹಾರಕ್ಕೆ ಕಾರಣವೆಂದು ಮೃತ ಅಧಿಕಾರಿಯೋರ್ವರ ಮೇಲೆ ಆರೋಪ ಹೊರಿಸಿದ್ದು, ಅವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.ಈಗಾಗಲೇ ಸಾಕಷ್ಟು ಬ್ಯಾಂಕ್‌ಗಳು ಬಾಗಿಲು ಮುಚ್ಚಿದ್ದು, ಜನರು ಕಷ್ಟಪಟ್ಟು ದುಡಿದು ಭವಿಷ್ಯಕ್ಕೆಂದು ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟ ಹಣಕ್ಕೆ ಭದ್ರತೆ ಇಲ್ಲದಂತಾಗಿದ್ದು, ಸಹಕಾರ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.

ಗ್ರಾಹಕರಿಗೆ ನಷ್ಟ ಆಗಲು ಬಿಡಲ್ಲ: ಅರವಿಂದ

ದಿ ಕಾರವಾರ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್‌ನಲ್ಲಿ ₹೫೪ ಕೋಟಿ ಹಗರಣ ಆಗಿದೆ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟ ಅಧಿಕಾರಿ ಗುರು ಹಾಗೂ ನಿವೃತ್ತ ಅಧಿಕಾರಿ ಆಶಾ ಬ್ಯಾಂಕ್ ಅವ್ಯವಹಾರಕ್ಕೆ ಕಾರಣರಾಗಿದ್ದಾರೆ ಎಂದು ಬ್ಯಾಂಕ್ ನಿರ್ದೇಶಕ ಅರವಿಂದ ತೆಂಡುಲಕರ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲೇ ಆಡಳಿತ ಮಂಡಳಿಗೆ ಗೊತ್ತಾಗಿದ್ದರೆ ಈ ರೀತಿ ಆಗಲು ಅವಕಾಶ ನೀಡುತ್ತಿರಲಿಲ್ಲ. ಗ್ರಾಹಕರಿಗೆ ನಷ್ಟ ಆಗಲು ಬಿಡುವುದಿಲ್ಲ. 5 ಸಾವಿರ ಗ್ರಾಹಕರಿದ್ದು, ಒಂದು ಪ್ರಧಾನ ಕಚೇರಿ, ಒಂದು ಶಾಖೆ ಇದೆ. ₹೮೮ ಕೋಟಿ ಠೇವಣಿಯಿದ್ದು, ₹9 ಕೋಟಿ ಸಾಲ ನೀಡಲಾಗಿದೆ. ₹5 ಲಕ್ಷವರೆಗಿನ ಮೊತ್ತಕ್ಕೆ ವಿಮೆಯಿದ್ದು, ಆ ಹಣದಿಂದ ಗ್ರಾಹಕರ ಠೇವಣಿ ಮೊತ್ತ ವಾಪಸ್ ನೀಡಲಾಗುತ್ತದೆ. ಉಳಿದ ಹಣವನ್ನು ಬ್ಯಾಂಕ್ ಆಸ್ತಿ ಮೂಲಕ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಹಗರಣ ಯಾವ ಕಾರಣದಿಂದ ಆಗಿದೆ ಎಂದು ತಿಳಿಯಲು ಆಡಿಟ್ ಮಾಡಲಾಗುತ್ತಿದೆ. ತಪ್ಪಿಸತಸ್ಥರ ವಿರುದ್ಧ ಕಾನೂನು ಕ್ರಮ ವಹಿಸಿದ್ದು, ಅಧಿಕಾರಿಗಳು ಮಾಡಿದ ತಪ್ಪಿನಿಂದ ಶತಮಾನಗಳ ಇತಿಹಾಸವಿದ್ದ ಬ್ಯಾಂಕ್ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಪೊಲೀಸ್ ದೂರು ನೀಡಲಾಗಿದ್ದು, ಬ್ಯಾಂಕ್ ನಿಯಮಾವಳಿ ಉಲ್ಲಂಘಿಸಿ ಹಣ ವರ್ಗಾವಣೆ ಮಾಡಲಾಗಿದೆ. ಸಣ್ಣ ಸಣ್ಣ ಮೊತ್ತದ ಹಣ ವರ್ಗಾವಣೆಯಾದ ಕಾರಣ ಆಡಳಿತ ಮಂಡಳಿ ಗಮನಕ್ಕೆ ಬಂದಿಲ್ಲ ಎಂದರು. ಅಧ್ಯಕ್ಷ ಚಂದ್ರಹಾಸ ಸ್ವಾರ, ವ್ಯವಸ್ಥಾಪಕ ವಾಸುದೇವ ಪಾಂಗ, ನ್ಯಾಯವಾದಿ ಅನುಜ ಅಗರನಾಯ್ಕ, ಪ್ರದೀಪ ಗಾಂವಕರ, ರಾಜೇಶ ಪಾವುಸ್ಕರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ